ಕೊಪ್ಪಳ: ರಾಜ್ಯದ ಮತ್ತೆ ನಾಲ್ವರಿಗೆ ಸಚಿವ ಸ್ಥಾನ ಸಿಕ್ಕಿರುವುದು ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮವರಿಗೆ ಸಚಿವ ಸ್ಥಾನ ಸಿಕ್ಕಿದೆಯಲ್ಲ. ಪಕ್ಷದ ಹೈಕಮಾಂಡ್ ಏನು ಮಾಡಿದೆಯೋ ಅದು ಸರಿ ಇದೆ ಎಂದರು. ಇದೇ ವೇಳೆ, ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕೋ ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷದ ಪರ ಅಥವಾ ವಿರುದ್ಧವಾಗಿ ಹೇಳಿಕೆ ನೀಡುವವರನ್ನು ಹೈಕಮಾಂಡ್ ಗಮನಿಸುತ್ತದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವ ಶಿಸ್ತು ಇದೆ? ಅವರ ಹೈಕಮಾಂಡ್ಗೆ ಏನು ಯೋಗ್ಯತೆ ಇದೆ?. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತಾರೆ. 17 ಜನರನ್ನು ಮತ್ತೆ ವಾಪಸ್ ಕರೆದುಕೊಳ್ಳುತ್ತೇವೆ ಅಂತಾರೆ. ಆದರೆ ಡಿ.ಕೆ ಶಿವಕುಮಾರ್ 17 ಜನರನ್ನು ಮತ್ತೆ ವಾಪಸ್ ಕರೆದುಕೊಳ್ಳುವುದಿಲ್ಲ ಎಂದೂ ಹೇಳುತ್ತಾರೆ. ಅವರ ಪಕ್ಷದಲ್ಲಿ ಏನು ಶಿಸ್ತು ಇದೆ? ಎಲ್ಲ ಪಕ್ಷದಲ್ಲಿಯೂ ಇದು ಇರುತ್ತದೆ ಎಂದರು.
ಸಂಸದನಾಗಿರುವುದು ತೃಪ್ತಿ ಇದೆ:
ಸದ್ಯ ನಾನು ಲೋಕಸಭಾ ಸದಸ್ಯನಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮುಂದೆ ಪಕ್ಷ ಏನು ಸೂಚನೆ ನೀಡುತ್ತದೆಯೋ ಅದನ್ನು ಪಾಲಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಜನರಲ್ಲಿ ಚರ್ಚೆ ಇರಬಹುದು. ಅದನ್ನು ಅಲ್ಲಗಳೆಯುವಂತಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಿಸುವಂತೆ ಕೋರಿದ್ದ ಅರ್ಜಿ ವಜಾ: ಬಿಎಸ್ವೈಗೆ ಬಿಗ್ ರಿಲೀಫ್