ಕೊಪ್ಪಳ:ಅಂದು ಕೊಂಡಂತೆ ಎಲ್ಲವೂ ನಡೆದರೆ ನಿಸರ್ಗ ಸೌಂದರ್ಯದ ಜೊತೆಗೆ ಕೃತಕ ಸೌಂದರ್ಯದೊಂದಿಗೆ ಕೊಪ್ಪಳದ ಹುಲಿಕೆರೆ ಆಕರ್ಷಕವಾಗಿ ಕಂಗೊಳಿಸಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಹೊಸ ಪ್ಲಾನ್ನೊಂದಿಗೆ ಹುಲಿಕೆರೆ ಅಭಿವೃದ್ದಿಗೆ ಸರ್ಕಾರದ ಅನುಮೋದನೆ ದೊರಕಿದ್ದು, ನೀಲನಕ್ಷೆ ಸಿದ್ಧವಾಗಿದೆ.
ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದ ಕೊಪ್ಪಳ ನಗರದ ಪ್ರಸಿದ್ಧ ಹುಲಿಕೆರೆ ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗಿದೆ. ನಿಸರ್ಗದ ಸೌಂದರ್ಯವನ್ನು ಹೊಂದಿರುವ ಹುಲಿಕೆರೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಿ ಪ್ರವಾಸಿ ತಾಣವನ್ನಾಗಿ ಮಾಡಲು ಈಗ ನಗರಸಭೆ ಮತ್ತೊಮ್ಮೆ ನಿರ್ಧರಿಸಿದ್ದು, ಜಿಲ್ಲಾಡಳಿತದಿಂದ ಅನುಮೋದನೆಯೊಂದಿಗೆ ಕೆರೆ ಪ್ರಾಧಿಕಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಕಳೆದ ವರ್ಷ ಪ್ರಸ್ತಾವನೆ ಸಲ್ಲಿಸಿದೆ.
ಪ್ರಸ್ತಾವನೆಗೆ ಅನುಮೋದನೆ ದೊರಕಿದ್ದು, ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ಈಗಾಗಲೇ ಡಿಪಿಆರ್ ತಯಾರಿಸಲು ನೀಡಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಅಂದಾಜು ಐದು ಕೋಟಿ ರೂ. ವೆಚ್ಚದಲ್ಲಿ ಹುಲಿಕೆರೆ ಅಭಿವೃದ್ಧಿ ಮಾಡಲು ನೀಲನಕ್ಷೆ ತಯಾರಿಸಲಾಗಿದೆ. ಯೋಜನೆಯಂತೆ ತೂಗು ಸೇತುವೆ, ಈಜುಕೊಳ, ಕೃತಕ ಫಾಲ್ಸ್, ಬೋಟಿಂಗ್, ಮಕ್ಕಳ ಆಟಿಕೆ, ರೆಸ್ಟೋರೆಂಟ್ ಮಾದರಿಯ ಹೊಟೇಲ್ ಸೇರಿದಂತೆ ಇನ್ನಿತರ ಸೌಲಭ್ಯಗಳು ಹೊಸ ಕಾನ್ಸೆಪ್ಟ್ನಲ್ಲಿ ಅಳವಡಿಸಲಾಗಿದೆ.
ಹುಲಿಕೆರೆ ಅಭಿವೃದ್ಧಿಪಡಿಸಿದ ಖಾಸಗೀಯವರು 30 ವರ್ಷದ ಲೀಸ್ನೊಂದಿಗೆ ನಿರ್ವಹಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕೊಪ್ಪಳ ನಗರಸಭೆ ಪ್ರಭಾರಿ ಪೌರಾಯುಕ್ತ ಮಂಜುನಾಥ ಅವರು ತಿಳಿಸಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಹುಲಿಕೆರೆ ಒಂದೊಳ್ಳೆ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ.