ಕೊಪ್ಪಳ: ಕೊರೊನಾದಿಂದ ಸಾರ್ವಜನಿಕರ ದರ್ಶನಕ್ಕೆ ನಿಷೇಧ ಹೇರಲಾಗಿದ್ದ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮದೇವಿ ದೇವಸ್ಥಾನ ಭಕ್ತರಿಗೆ ಇಂದಿನಿಂದ ಮುಕ್ತವಾಗಿದೆ. ಬೆಳಗ್ಗೆ ಅರ್ಚಕರು ದೇವಸ್ಥಾನದ ದ್ವಾರದ ಬಾಗಿಲಿಗೆ ಪೂಜೆ ಸಲ್ಲಿಸಿ ದ್ವಾರವನ್ನ ಓಪನ್ ಮಾಡಿದರು.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕೋವಿಡ್-19 ಮಾರ್ಗಸೂಚಿಯಂತೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಮಾಡಲಾಗುತ್ತಿದೆ. ಮುಂಜಾನೆಯೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಪಕ್ಕದ ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ದೇವಸ್ಥಾನ ಪ್ರವೇಶಕ್ಕೆ ನಿಷೇಧವಿದ್ದರೂ ಭಕ್ತರು ಬಂದು ದೇವಸ್ಥಾನ ಹೊರಗಡೆಯೇ ನಿಂತು ಕರ್ಪೂರ ಬೆಳಗಿ ಭಕ್ತಿ ಸಲ್ಲಿಸಿ ಹೋಗುತ್ತಿದ್ದರು. ಈಗ ದೇವರ ದರ್ಶನಕ್ಕೆ ದೇವಸ್ಥಾನದ ಬಾಗಿಲು ತೆರೆದಿರುವುದು ಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ.