ಗಂಗಾವತಿ : ಗುಜರಾತಿನಿಂದ ಗಡೀಪಾರು ಶಿಕ್ಷೆಗೆ ಒಳಗಾದ ಕೇಂದ್ರದ ಗೃಹ ಸಚಿವ ಅಮಿತ್ ಶಾ ನೀಡುವ ಹಿಂದಿ ಭಾಷೆಯ ಬಗೆಗಿನ ಉಪನ್ಯಾಸ ನಮಗೆ ಬೇಕಿಲ್ಲ ಎಂದು ವಿಧಾನ ಪರಿಷತ್ತಿನ ವಿರೋದ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ ಹೇಳಿದರು. ಮಾಜಿ ಸಂಸದ ಹೆಚ್.ಜಿ. ರಾಮುಲು ನಿವಾಸಕ್ಕೆ ಸೌಹಾರ್ದ ಭೇಟಿಗೆ ಆಗಮಿಸಿದ್ದ ಹರಿಪ್ರಸಾದ್ ಅವರು ಈ ಬಗ್ಗೆ ಮಾತನಾಡಿ, ಹಿಂದಿ ಹೇರಿಕೆಯ ಬಗ್ಗೆ ಗುಜರಾತ್ ಹೈಕೋರ್ಟ್ ಏನು ಆದೇಶ ನೀಡಿದೆ ಎಂಬುವುದು ಮೊದಲು ಗೃಹಸಚಿವರು ತಿಳಿದುಕೊಳ್ಳಲಿ ಎಂದರು.
ದೇಶದಲ್ಲಿ 22 ಅಧಿಕೃತ ಭಾಷೆಗಳಿವೆ. ಅದರಲ್ಲಿ ಹಿಂದಿಯೂ ಒಂದು. ನನಗೆ ಬೇಕಿರುವ ಭಾಷೆಯಲ್ಲಿ ನಾನು ಮಾತನಾಡಬಹುದು. ಹಿಂದಿ ಕಡ್ಡಾಯ ಹೇರಿಕೆ ಸಲ್ಲದು. ನಾನು ಕಾಂಗ್ರೆಸ್ಸಿಗನಾಗಿ ನನಗೂ ಹಿಂದಿಯ ಬಗ್ಗೆ ಗೌರವ ಇದೆ. ಒಟ್ಟು 19 ಸಾವಿರ ಭಾಷೆಗಳುಳ್ಳ ಬಹುತ್ವ ಭಾರತದಲ್ಲಿ ಯಾವುದೇ ಒಂದು ಭಾಷೆ ಕಡ್ಡಾಯ ಮಾಡಲಾಗದು. ಒಂದು ಆಹಾರ, ಒಂದು ಭಾಷೆ ಎಂಬುವುದು ಸರಿಯಲ್ಲ. ವೈವಿಧ್ಯತೆಯಲ್ಲಿ ಏಕತೆ ಕಂಡ ಮಹಾನ್ ದೇಶ ಭಾರತ. ಹೀಗಾಗಿ, ನಮಗಿರುವ ತ್ರಿಭಾಷಾ ಸೂತ್ರವೇ ಸರಿ ಎಂದರು.
ಮಧ್ಯಪ್ರಾಚ್ಯ, ಗಲ್ಫ್ ಪೆಟ್ರೋಲ್ ತಿರಸ್ಕರಿಸಿ : ರಾಜ್ಯದಲ್ಲಿ ಎದ್ದಿರುವ ಧರ್ಮ ದಂಗಲ್‌ನ ಭಾಗವಾಗಿ ಕೆಲ ಮತೀಯವಾದಿಗಳು ನಿಜವಾಗಲೂ ಮುಸಲ್ಮಾನರನ್ನು ವಿರೋಧಿಸುವುದೇ ಆಗಿದ್ದರೆ, ಮುಸಲ್ಮಾನರ ಬಾಹುಳ್ಯದ ಗಲ್ಫ್ ರಾಷ್ಟ್ರದಿಂದ ಬರುವ ಡೀಸೆಲ್, ಪೆಟ್ರೋಲ್ ತ್ಯಜಿಸಿ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸವಾಲು ಹಾಕಿದ್ದಾರೆ.
ಆರ್ಎಸ್ಎಸ್ ಎಂದು ಹೇಳಿಕೊಂಡು ಓಡಾಡುವ ಪರಿವಾರದ ಸಂತತಿ, ಬ್ರಿಟಿಷರ ಏಜೆಂಟರಾಗಿದ್ದರಲ್ಲದೆ, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಕ್ವಿಟ್ ಇಂಡಿಯಾ ಚಳವಳಿಯ ಸಂಪೂರ್ಣ ಬದ್ಧವೈರಿಗಳಾಗಿದ್ದರು ಎಂದು ಹರಿಪ್ರಸಾದ್ ಆರೋಪಿಸಿದರು.
ಸಾವರ್ಕರ್, ಗೊಲವರ್ಕರ್, ವಾಜಪೇಯಿ ಸೇರಿದಂತೆ ಯಾರೊಬ್ಬರಿಗೂ ಸ್ವತಂತ್ರ ಚಳವಳಿಯ ಆಸಕ್ತಿ ಇರಲಿಲ್ಲ. ಅಲ್ಲದೇ, ಇವರೆಲ್ಲ ಸ್ವಾತಂತ್ರ್ಯ ಹೋರಾಟದ ವಿರೋಧಿಗಳಾಗಿದ್ದು, ಯಾರೂ ಕೂಡ ಹೋರಾಡಿದವರಲ್ಲ. ಈ ದೇಶ ಬಗ್ಗೆ ಮಾತನಾಡುವ ಹಕ್ಕು ಸಂಘ ಪರಿವಾರಕ್ಕೆ ಇಲ್ಲ. ಇವರು ದೇಶ ಭಕ್ತರಲ್ಲ, ದ್ವೇಷ ಭಕ್ತರು ಎಂದು ಕಿಡಿಕಾರಿದರು.
ಇದನ್ನೂ ಓದಿ: 2 ಲಕ್ಷ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಸಹಾಯಕ ಯೋಜನಾಧಿಕಾರಿ!