ಗಂಗಾವತಿ : ಶಾಸಕ ಬಸವರಾಜ ದಢೇಸ್ಗೂರು ಶನಿವಾರ ಕ್ಷೇತ್ರದಲ್ಲಿ ಟ್ರಾಕ್ಟರ್ ರ‍್ಯಾಲಿ ಹಮ್ಮಿಕೊಳ್ಳುವ ಮೂಲಕ ಕಾಂಗ್ರೆಸ್ ವಿರುದ್ಧ ಶಕ್ತಿ ಪ್ರದರ್ಶನ ನಡೆಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಪ್ತ ಶಾಸಕ ಬಸವರಾಜ ದಢೇಸ್ಗೂರು, ಕನಕಗಿರಿ ಕ್ಷೇತ್ರದ ಜಂಗಮರ ಕಲ್ಗುಡಿಯಿಂದ ಕಾರಟಗಿವರೆಗೂ ಸುಮಾರು ನೂರಾರು ಟ್ರ್ಯಾಕ್ಟರ್ಗಳನ್ನು ಬಳಸಿ ರ‍್ಯಾಲಿ ಮಾಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿಎಸ್‌ವೈ ಪುತ್ರ ಬಿ ವೈ ವಿಜಯೇಂದ್ರ ಅವರು ಕಾರಟಗಿ ಪಟ್ಟಣಕ್ಕೆ ಆಗಮಿಸಿ ಪಕ್ಷದಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗಿಯಾಗುವ ಉದ್ದೇಶಕ್ಕೆ ಭವ್ಯ ಸ್ವಾಗತ ಕೋರುವ ರ‍್ಯಾಲಿ ಆಯೋಜಿಸಲಾಗಿತ್ತು.
ಕಲ್ಗುಡಿಯಿಂದ ಕಾರಟಗಿವರೆಗೂ ರ‍್ಯಾಲಿ ನಡೆಸಿದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ವಾರದ ಹಿಂದಷ್ಟೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ರ‍್ಯಾಲಿ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದರು.
ಆದರೆ, ಬಿಜೆಪಿ ಸಮಾವೇಶಕ್ಕೆ ಜನರನ್ನ ಹಣ ಕೊಟ್ಟು ಟ್ರ್ಯಾಕ್ಟರ್‌ಗಳಲ್ಲಿ ತರಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ವಿಡಿಯೋ ಒಂದು ವೈರಲ್ ಆಗಿದೆ. ಏನೇ ಇದ್ರೂ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಶಕ್ತಿ ಪ್ರದರ್ಶನ ಇದೀಗ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.