ಕುಷ್ಟಗಿ (ಕೊಪ್ಪಳ): ಮುಂಬರುವ ಗ್ರಾಪಂ ಚುನಾವಣೆಗಳು ಸೂಕ್ಷ್ಮವಾಗಿ ನಡೆಯುತ್ತಿರುವ ಹಿನ್ನೆಲೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ಗಳು ಯಾವುದೇ ಕಾರಣಕ್ಕೂ ಊರ ಉಸಾಬರಿಗೆ ಹೋಗಬಾರದು ಎಂದು ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಖಡಕ್ ವಾರ್ನಿಂಗ್ ನೀಡಿದರು.
ಗ್ರಾಪಂ ಚುನಾವಣೆ ಹಿನ್ನೆಲೆ ಯಾರೇ ಆಗಲಿ ಶಾಂತಿ ಭಂಗಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಹಳೇ ದ್ವೇಷ, ವೈಷಮ್ಯದ ಗಲಾಟೆಗಳಿಗೆ ಚುನಾವಣೆ ಪ್ರಚೋದನೆ ಆಗಬಾರದು. ತಾವಾಯಿತು ತಮ್ಮ ಮನೆ ಕೆಲಸವಾಯಿತು ಎಂಬಂತೆ ಇರಬೇಕು ಎಂದು ಎಚ್ಚರಿಸಿದರು.
ಒಮ್ಮೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪ್ರಕರಣ ದಾಖಲಾದರೆ 10 ವರ್ಷಗಳವರೆಗೆ ಅವರ ವರ್ತನೆ ತಿದ್ದುಪಡಿಗೆ ಅವಕಾಶ ಇರುತ್ತದೆ. ಈ ವರ್ಷಗಳಲ್ಲಿ ಹದ್ದು ಮೀರಿದರೆ ಕಾನೂನು ಕ್ರಮ ಮತ್ತಷ್ಟು ಬಿಗಿಯಾಗಲಿದೆ. ನಿಮ್ಮ ವೈಯಕ್ತಿಕ ವಿವರಗಳು ಈಗಾಗಲೇ ನಮ್ಮ ಬಳಿ ಇರುವುದರಿಂದ ಮಿಸುಕಾಡಲು ಸಾಧ್ಯವಿಲ್ಲ. ಬರಲಿರುವ ಚುನಾವಣೆ ಸೂಕ್ಷ್ಮವಾಗಿದ್ದು, ಗಲಾಟೆಯಿಂದ ದೂರ ಇರಬೇಕು ಎಂದರು.