ಗಂಗಾವತಿ (ಕೊಪ್ಪಳ): ನಗರದಲ್ಲಿ ನಡೆದ ಗಣೇಶನ ಮೆರವಣಿಗೆ ಸಂದರ್ಭದಲ್ಲಿ ಪ್ರಾರ್ಥನಾ ಮಂದಿರವೊಂದರ ಮುಂದೆ ಪೂಜೆ ಮತ್ತು ಮಂಗಳಾರತಿ ಮಾಡಿದ ಪ್ರಕರಣ ಸಂಬಂಧ ಕರ್ತವ್ಯ ಲೋಪ ಆರೋಪದ ಮೇಲೆ ನಗರ ಠಾಣೆಯ ಪಿಐ ಸೇರಿದಂತೆ ಮೂವರನ್ನು ಅಮಾನತು ಮಾಡಿ ಪೊಲೀಸ್ ಇಲಾಖೆ ಶಿಸ್ತು ಕ್ರಮಕೈಗೊಂಡಿದೆ. ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಡಿವೆಪ್ಪ ಗೋಡಿಗೊಪ್ಪ, ಪಿಎಸ್ಐ ಕಾಮಣ್ಣ, ಕಾನ್ಸ್ಟೇಬಲ್ ಮರಿಯಪ್ಪ ಅವರನ್ನು ಅಮಾನತು ಮಾಡಿ ಇಲಾಖೆ ಆದೇಶ ನೀಡಿದೆ.
ಗಣೇಶನ ಮೆರವಣಿಗೆ ಸಂದರ್ಭದಲ್ಲಿ ಪ್ರಾರ್ಥನಾ ಮಂದಿರವೊಂದರ ಮುಂದೆ ಮೆರವಣಿಗೆಕಾರರು ಪೂಜೆ ಸಲ್ಲಿಸಿದ್ದಲ್ಲದೇ, ಮಂಗಳಾರತಿ ಮಾಡಿದ್ದರು. ಇದು ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಸಮಿತಿಯ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪರಿಸ್ಥಿತಿ ತಿಳಿಗೊಳಿಸುವಲ್ಲಿ ಹಾಗೂ ಕಾನೂನು ಪಾಲನೆಯಲ್ಲಿ ಲೋಪ ಎಸಗಿದ ಆರೋಪದ ಮೇಲೆ ನಗರ ಠಾಣೆಯ ಮೂವರು ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಗಂಗಾವತಿ ನಗರ ಠಾಣೆಯ ಪಿಐ ಆಗಿ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳುವಂತೆ ಮಂಜುನಾಥ್ ಎಂಬುವರಿಗೆ ಕೊಪ್ಪಳ ಎಸ್ಪಿ ಸೂಚಿಸಿದ್ದಾರೆ.
ಇದನ್ನೂ ಓದಿ: ರಾಮನಗರ: ಗಣೇಶ ನಿಮಜ್ಜನ ವೇಳೆ ಹಾರ್ನ್ ಹಾಕಿದ ಚಾಲಕನಿಗೆ ಹಲ್ಲೆ, ವಾಹನಕ್ಕೆ ಕಲ್ಲು