ಗಂಗಾವತಿ: ತಾಲೂಕಿನ ಜಂಗಮರಕಲ್ಗುಡಿಯಲ್ಲಿ ಮಾ.14 ಮತ್ತು 15ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾವತಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಯಾಗಿದೆ. ಇತರೆ ತಾಲೂಕಿನ ಸಮ್ಮೇಳನದ ಲಾಂಛನಕ್ಕೆ ಹೋಲಿಸಿದರೆ ಗಂಗಾವತಿಯ ಲಾಂಛನ ಆಕರ್ಷಕವಾಗಿದೆ.
ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ಹಾಗೂ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಜಂಟಿಯಾಗಿ ಲಾಂಛನ ಬಿಡುಗಡೆ ಮಾಡಿದರು. ಚಾಮರದ ಕೆಳಗೆ ಸಣ್ಣದಾದ ವೃತ್ತಕಾರದಲ್ಲಿ ಕರ್ನಾಟಕದ ನಕಾಶೆಯಲ್ಲಿ ನಾಡದೇವಿ ಭುವನೇಶ್ವರಿ ವಿರಾಜಮಾನಳಾದ ಚಿತ್ರವಿದೆ. ಅದರ ಕೆಳಗೆ ದೊಡ್ಡದಾದ ಮತ್ತೊಂದು ವೃತ್ತಾಕಾರದಲ್ಲಿನ ಮೇಲ್ಭಾಗದಲ್ಲಿ ಭತ್ತ ಹರಡಿದ್ದು, ಆನೆಗೊಂದಿಯ ಬೆಟ್ಟದ ಸಾಲು, ಅಂಜನಾದ್ರಿ ದೇಗುಲ, ಚನ್ನಬಸವ ತಾತ, ಸಮ್ಮೇಳನ ನಡೆಯುವ ಗ್ರಾಮದ ಬೆಟ್ಟದ ಲಿಂಗೇಶ್ವರ, ಹನುಮ ವಿಗ್ರಹ, ಆನೆಗೊಂದಿಯ ಸ್ಮಾರಕ ಮೊದಲಾದ ಚಿತ್ರಗಳಿವೆ.
ಸಣಾಪುರದ ಜಲಾಶಯ, ತುಂಗಭದ್ರಾ ಜಲಾಶಯ ಸೇರಿದಂತೆ ತಾಲ್ಲೂಕಿನ ಸಮಗ್ರ ಚಿತ್ರಣ ಹಿಡಿದಿಡುವ ಯತ್ನ ಮಾಡಲಾಗಿದೆ. ಕೆಳಗೆ ಕಸಾಪದ ಲಾಂಛನವಿದ್ದು, ಮನುಷ್ಯ ಜಾತಿ ತಾನೊಂದೆ ವಲಂ ಎಂದು ಉಪ ಶೀರ್ಷಿಕೆ ಬರೆಯಲಾಗಿದೆ. ಅದರ ಕೆಳಗೆ ಕನ್ನಡ ಸಾಹಿತ್ಯ ಪರಿಷತ್ ಗಂಗಾವತಿ ಎಂದು ಬರೆಯಲಾಗಿದೆ.