ಕುಷ್ಟಗಿ(ಕೊಪ್ಪಳ): ಆರ್. ಡಿ.ಪಿ.ಆರ್. ಸರ್ವೆ, ಆರ್ಸಿಎಚ್ ಸರ್ವೆ, ಭಾಗ್ಯಲಕ್ಷ್ಮೀ, ಮಾತೃ ವಂದನ, ಚುನಾವಣಾ ಕರ್ತವ್ಯ, ಸ್ತ್ರೀ ಶಕ್ತಿ ಕೆಲಸಗಳನ್ನು ಬಹಿಷ್ಕರಿಸಿ ಅಂಗನವಾಡಿ ಕಾರ್ಯಕರ್ತೆಯರು ಸಿಡಿಪಿಓ ಕಛೇರಿ ಮುಂದೆ ಸೋಮವಾರ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದರು.
ಸಿಐಟಿಯು ನೇತೃತ್ವದ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷೆ ಕಲಾವತಿ ಮೆಣೆದಾಳ ಮಾತನಾಡಿ, ಸಿಎಂ ಯಡಿಯೂರಪ್ಪ ಅವರು, ಕಳೆದ ಮಾರ್ಚ 8ರ ಮಹಿಳಾ ದಿನಾಚರಣೆಯಂದು ಬಜೆಟ್ ಮಂಡಿಸಿ, ಅಂಗನವಾಡಿ ನೌಕರರ ಸಾಮಾನ್ಯ ಬೇಡಿಕೆಗಳನ್ನು ಈಡೇರಿಸಿಲ್ಲ. ಕಳೆದ ಮಾರ್ಚ 4ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಗಿತ್ತು.
ಆದರೆ ಕಳೆದ ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಯಾವುದೇ ಬೇಡಿಕೆ ಈಡೇರಿಸದೇ, ಐಸಿಡಿಎಸ್ಗೆ ಶೇ.40ರಷ್ಟು ಅನುದಾನ ಕಡಿತ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂ ಮಾಡುವುದು ಬೇಡ ಸರ್ಕಾರಕ್ಕೆ ಸಲ್ಲಿಸಿರುವ ವಿವಿಧ ಬೇಡಿಕೆ ಈಡೇರಿಸಬೇಕು. ಐಸಿಡಿಎಸ್ ಹೊರೆತುಪಡಿಸಿ ಡಿಸಿ ವ್ಯಾಪ್ತಿಯ ಕೆಲವು ಕೆಲಸಗಳನ್ನು ನಿರ್ಭಂಧಿಸಿ ಒತ್ತಡ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. 45ರಿದ 50 ವಯಸ್ಸಿನ ಅಂಗನವಾಡಿ ಕಾರ್ಯಕರ್ತೆಯರ 6 ಸೇವೆಗಳನ್ನು ಮಾತ್ರ ಮಾಡುವ ಒಪ್ಪಂದವನ್ನು 26 ಸೇವೆಗೆ ವಿಸ್ತರಿಸಲಾಗಿದ್ದು, ಗೌರವ ಧನ ಕಡಿಮೆಯಾಗಿದೆ, ಕೆಲಸದ ಒತ್ತಡ ಜಾಸ್ತಿಯಾಗುತ್ತಿದೆ. ದಿನೇ ದಿನೇ ಕೆಲಸದ ಒತ್ತಡದಿಂದ ಮಾನಸಿಕ, ದೈಹಿಕ ತೊಂದರೆ ಎದುರಿಸುವಂತಾಗಿದೆ ಎಂದರು.
ಸರ್ಕಾರ ಅಂಗನವಾಡಿ ಉದ್ದೇಶದ ಸೇವೆಗಳನ್ನು ಬಿಟ್ಟಿ ಕೆಲಸದ ರೀತಿ ಮಾಡಿಸಿಕೊಳ್ಳುತ್ತಿದ್ದು, ಯಾವ ಕೆಲಸಕ್ಕೆಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಿಕೊಂಡಿದ್ದೀರಿ ಅದೇ ಕೆಲಸಕ್ಕೆ ಬಳಸಿಕೊಳ್ಳಬೇಕು ಎಂದರು.