ಕೊಪ್ಪಳ: ಇತ್ತೀಚೆಗೆ ಜಿಲ್ಲೆಯ ಗಂಗಾವತಿ ಹಾಗೂ ಇತರೆ ಭಾಗದಲ್ಲಿ ಸುರಿದ ಮಳೆಯಿಂದ ಹಾನಿಯಾದ ಬೆಳೆಗೆ, ಎಕರೆಗೆ ನಾಲ್ಕೈದು ಸಾವಿರ ರೂಪಾಯಿ ಬಿಡುಗಡೆ ಮಾಡಿಸಿರೋದೇ ದೊಡ್ಡ ಸಾಧನೆ ಎಂಬಂತೆ ಇಲ್ಲಿನ ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಟೀಕಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮಳೆಯಿಂದ ಬೆಳೆ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ, ನಾವು ಜಿಲ್ಲಾಧಿಕಾರಿಗಳ ಮೂಲಕ ಇತ್ತೀಚಿಗೆ ಮನವಿ ಸಲ್ಲಿಸಿದ್ದೆವು. ಬೆಳೆಹಾನಿ ಪರಿಹಾರವಾಗಿ ಸಿಎಂ 48 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನಾನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ.
ಈಗ ಸರ್ಕಾರ ಬಿಡಗಡೆ ಮಾಡಿರುವ ಹಣ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ನಡುವೆ ಎಂಬ ಮಾಹಿತಿ ಇದೆ. ನಮ್ಮ ಜಿಲ್ಲೆಯಲ್ಲಿಯೇ 20 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಎಷ್ಟು ಹಾನಿಯಾಗಿದೆ ಎಂಬುದು ಗೊತ್ತಿಲ್ಲ. ಸರ್ಕಾರದಿಂದ ಗೈಡ್ಲೈನ್ಸ್ ಬಂದಿಲ್ಲ. ಎನ್ಡಿಆರ್ಎಫ್ ನಾರ್ಮ್ಸ್ ಪ್ರಕಾರ ಹೆಕ್ಟೇರ್ಗೆ 13,500 ರೂ. ಪರಿಹಾರ ನೀಡಬೇಕು. ರಾಜ್ಯದ ಪಾಲು ಎಲ್ಲಿದೆ? ಎಕರೆಗೆ ನಾಲ್ಕರಿಂದ ಐದು ಸಾವಿರ ರೂ. ಬಿಡುಗಡೆ ಮಾಡಿಸಿರುವುದನ್ನೇ, ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿಕೊಳ್ತಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಆಗ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಗೊಳಗಾದಾಗ ಪ್ರತಿ ಹೆಕ್ಟೇರ್ಗೆ 25 ಸಾವಿರ ರೂ. ಪರಿಹಾರ ನೀಡಲಾಗಿತ್ತು. ಐದು ವರ್ಷದ ಹಿಂದೆ 25 ಸಾವಿರ ರೂ.ಪರಿಹಾರ ನೀಡಲಾಗಿತ್ತು. ಈಗ ಬಿಜೆಪಿ ಸರ್ಕಾರ ಬೆಳೆಹಾನಿಗೆ ತನ್ನ ಪಾಲು ಏನು ನೀಡಿದೆ ಎಂದು ಪ್ರಶ್ನಿಸಿದರು.
ಈಗ ಬೆಳೆಯ ವೆಚ್ಚವೂ ಜಾಸ್ತಿಯಾಗಿದೆ. ಹೀಗಾಗಿ, ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಬೇಕಿತ್ತು. ಬರಿ ಹಸಿರು ಟವೆಲ್ ಹೆಗಲಿಗೆ ಹಾಕಿಕೊಂಡು ನಾವು ರೈತರ ಪರ ಎಂದು ಹೇಳುವುದಲ್ಲ. ರಾಜ್ಯ ಸರ್ಕಾರದ ಪಾಲು ಏನು? ಎಂದು ಕೇಳಲು ನಿಮ್ಮಿಂದ ಆಗದಿದ್ದರೆ ನಮ್ಮನ್ನಾದರೂ ಸಿಎಂ ಬಳಿ ಕರೆದುಕೊಂಡು ಹೋಗಿ. ನಾವಾದರು ಸಿಎಂ ಅವರನ್ನು ಕೇಳುತ್ತೇವೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.