ಗಂಗಾವತಿ: ಸರಳ ಸಜ್ಜನಿಕೆಯ ರಾಜಕಾರಣಿ ಎಂದು ಹೆಸರಾಗಿದ್ದ, ಕನಕಗಿರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕ, ಒಮ್ಮೆ ಮಂತ್ರಿಯಾಗಿದ್ದ ಮಾಜಿ ಕಾಂಗ್ರೆಸ್ ಸಚಿವ ಶ್ರೀರಂಗದೇವರಾಯಲು ಮಂಗಳವಾರ ಸಂಜೆ ಗಂಗಾವತಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಮೃತರಿಗೆ 85 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಲಲಿತಾರಾಣಿ, ಪುತ್ರರಾದ ಉದ್ಯಮಿ ಕೃಷ್ಣದೇವರಾಯ, ವೈದ್ಯ ವಿ.ಎಸ್.ಎನ್.ಡಿ ರಾಯಲು ಪುತ್ರಿ ಲತಾ ಸೇರಿದಂತೆ ಅಪಾರ ಬಂಧು-ಬಳಗವಿದೆ. ವಿಜಯನಗರದ ಮೂಲ ರಾಜಧಾನಿಯಾಗಿದ್ದ ಆನೆಗೊಂದಿಯ ರಾಜವಂಶಕ್ಕೆ ಸೇರಿದ್ದ ಅರವೀಡು ವಂಶದ ಶ್ರೀರಂಗದವರಾಯಲು ನರಪತಿ ಸಂಸ್ಥಾನಕ್ಕೆ ಸೇರಿದವರು.
1938ರಲ್ಲಿ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿಯೇ ಶ್ರೀವೆಂಕಟದೇವರಾಯಲು, ಶ್ರೀಲಕ್ಷ್ಮಿದೇವಮ್ಮ ದಂಪತಿಗೆ ಶ್ರೀರಂಗದೇವರಾಯಲು ಜನಿಸಿದ್ದರು. ಮೃತರ ಅಂತ್ಯಸಂಸ್ಕಾರವು ಕ್ಷತ್ರೀಯ ವಿಧಿ ವಿಧಾನಗಳಂತೆ ಗಂಗಾವತಿ ತಾಲೂಕಿನ ಸ್ವಗ್ರಾಮ ಆನೆಗೊಂದಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಧಿಕಾರಾವಧಿಯಲ್ಲಿ ಸಾಕಷ್ಟು ಜನಪರ ಯೋಜನೆ ತಂದ ಶ್ರೇಯಸ್ಸು ರಂಗದೇವರಾಯಲು ಅವರಿಗೆ ಸೇರುತ್ತದೆ.
ಐದು ಬಾರಿ ಶಾಸಕ, ಮಂತ್ರಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹೊಸಪೇಟೆಯ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಮುಗಿಸಿದ್ದ ರಂಗದೇವರಾಯಲು, 1967ರಲ್ಲಿ ಆಂಧ್ರದ ಅನಕಾಪಲ್ಲಿ ಮೂಲದ ರಾಜಮನೆತನದ ಲಲಿತಾರಾಣಿ ಅವರನ್ನು ವಿವಾಹವಾಗುತ್ತಾರೆ. ಕಾಂಗ್ರೆಸ್ ಪಕ್ಷದಿಂದ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ರಾಯಲು, ತಮ್ಮ ಉಸಿರು ಇರೋವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಇದ್ದರು. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 1989, 1994, 1999 ಹೀಗೆ ಗಂಗಾವತಿ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ ಏಕೈಕ ರಾಜಕಾರಣಿ ಎಂಬ ಖ್ಯಾತಿ ಈಗಲೂ ರಂಗದೇವರಾಯಲು ಅವರ ಹೆಸರಲ್ಲಿದೆ.
1978ರಲ್ಲಿ ರಾಜಕೀಯ ಪ್ರವೇಶಿಸಿದ್ದ ಇವರು, ಅದೇ ವರ್ಷದಲ್ಲಿ ಜೆಎನ್ಪಿ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ ಎಚ್.ಸಿ. ಯಾದವರಾವ್ ವಿರುದ್ಧ ಪರಾಭವಗೊಂಡಿದ್ದರು. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 1983 ಹಾಗೂ 1985ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕರಾಗಿದ್ದರು.
ಮಂತ್ರಿ ಸ್ಥಾನ: ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ 1993ರಲ್ಲಿ ಶ್ರೀರಂಗದೇವರಾಯಲು ಅವರಿಗೆ ಕಾಡಾ ಖಾತೆಯ ಸಚಿವ ಸ್ಥಾನ ಸಿಕ್ಕಿತ್ತು. ಕಾಡಾ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶ ಅಚ್ಚುಕಟ್ಟು ಅಭಿವೃದ್ಧಿ, ಹೈದರಾಬಾದ್ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಮಂಡಳಿ ಜವಾಬ್ದಾರಿ ಖಾತೆಯ ವ್ಯಾಪ್ತಿಯಲ್ಲಿತ್ತು. ಎಸ್.ಎಂ. ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಖಾದಿ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿತ್ತು. ಆಂಧ್ರಪ್ರದೇಶದಿಂದ ತರಲಾಗಿದ್ದ ಅನಕಾಪಲ್ಲಿ ಎಂಬ ವಿಶೇಷ ಕಬ್ಬಿನ ತಳಿಯನ್ನು ಆನೆಗೊಂದಿ ಭಾಗದಲ್ಲಿ ಅಭಿವೃದ್ಧಿ ಪಡಿಸಿದ ರೂವಾರಿಯಾಗಿ ರಂಗದೇವರಾಯಲು ಗುರುತಿಸಿಕೊಂಡಿದ್ದರು.
ಇದನ್ನೂ ಓದಿ: ಅಂಬೇಡ್ಕರ್‌ವಾದಿ, ಜನಪರ ಹೋರಾಟಗಾರ ಮಂಟೇಲಿಂಗಯ್ಯ ನಿಧನ