ಕೊಪ್ಪಳ: ವರ್ಷದಿಂದ ವರ್ಷಕ್ಕೆ ಮಳೆಗಾಲ ಕಡಿಮೆಯಾಗುತ್ತಿದೆ. ಅದರಲ್ಲೂ ಬರದ ನಾಡು ಕೊಪ್ಪಳ ಜಿಲ್ಲೆಯಲ್ಲಿ ಪದೇ ಪದೇ ಭೀಕರ ಬರಗಾಲ ಆವರಿಸುತ್ತಿದೆ. ಮುಂಗಾರು ಕೃಷಿ ಚಟುವಟಿಕೆಗಳು ಈ ಅವಧಿಗೆ ಬಿರುಸಿನಿಂದ ಆರಂಭವಾಗಬೇಕಿತ್ತು. ಆದರೆ, ಈವರೆಗೂ ಮಳೆಯಾಗದೆ ಇರೋದು ಕೃಷಿ ಚಟುವಟಿಕೆಗಳು ಮಂಕಾಗಿವೆ.
ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಆದರೂ ಸಹ ಮಳೆರಾಯನ ಕೃಪೆ ಜಿಲ್ಲೆಯಲ್ಲಿ ಆಗಿಲ್ಲ. ಅಶ್ವಿನಿ, ಭರಣಿ ಮಳೆಯ ಸಂದರ್ಭದಲ್ಲಿ ಕೊಂಚ ಮಳೆಯಾಗಿರುವುದನ್ನು ಬಿಟ್ಟರೆ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕೃತ್ತಿಕಾ ಮಳೆ ನಕ್ಷತ್ರ ಸಂಗಮವಾದರೂ ಮಳೆಯಾಗಿಲ್ಲ. ಇದು ಮುಂಗಾರು ಹಂಗಾಮಿಗೆ ಅತ್ಯಂತ ಅಗತ್ಯವಾದ ಮಳೆ. ಈ ಮಳೆಗೆ ರೈತರು ಬಿತ್ತನೆ ಕಾರ್ಯ ಪ್ರಾರಂಭಿಸುತ್ತಾರೆ. ಆದರೆ, ಈ ಬಾರಿ ಈವರೆಗೂ ಮುಂಗಾರು ಮಳೆಯಾಗದೆ ಇರೋದು ರೈತಾಪಿ ಸಂಕುಲ ಮುಗಿಲ ಕಡೆ ಮುಖಮಾಡಿ ಕುಳಿತುಕೊಳ್ಳುವಂತಾಗಿದೆ.
ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಬಿತ್ತನೆಯ ಯೋಗ್ಯ ಭೂಮಿಯಲ್ಲಿ ಒಂದೇ ಒಂದು ಬೀಜ ಬಿದ್ದಿಲ್ಲ. ಖಾಲಿ ಹೊಲಗಳೇ ಕಾಣುತ್ತಿವೆ. ಮಳೆಯಾಗುತ್ತದೆ ಎಂಬ ಆಸೆಯಲ್ಲಿ ರೈತರು ಖಾಲಿ ಹೊಲವನ್ನು ಹರಗಿ ಹಸನು ಮಾಡಿಟ್ಟುಕೊಂಡು ವರುಣನಾಗಮನಕ್ಕೆ ಕಾಯುತ್ತಿದ್ದಾರೆ. ಸತತ ಬರಗಾಲ ಆವರಿಸುತ್ತಿದೆ. ಹೀಗಾಗಿ, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುತ್ತಿದೆ. ರೈತರ ಬದುಕು ಈಗ ಆ ದೇವರಿಗೆ ಪ್ರೀತಿ ಎಂಬಂತಾಗಿದೆ. ಕಳೆದ ವರ್ಷ ಮೇ ತಿಂಗಳ ಈ ವೇಳೆಗೆ 17 ಮಿಲಿ ಮೀಟರ್ ಮಳೆಯಾಗಿತ್ತು. ಆದರೆ, ಈ ವರ್ಷ ಮೇ ತಿಂಗಳ 17 ರವರೆಗೆ ಆಗಿರೋದು ಕೇವಲ 0.6 ಮಿಲಿ ಮೀಟರ್ ಮಳೆ ಮಾತ್ರ. ಅಂದರೆ ಶೇ. 96ರಷ್ಟು ಮಳೆ ಕೊರತೆಯಾಗಿದೆ.
2017ರ ಮುಂಗಾರು ಪೂರ್ವದಲ್ಲಿ ಜನವರಿಯಿಂದ, ಮಾರ್ಚ್ 31ರವರೆಗೆ ವಾಡಿಕೆ ಮಳೆ 81.4 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಆಗಿದ್ದು 63.2 ಮೀಟರ್ ಮಳೆ. ಶೇ. 22ರಷ್ಟು ಮಳೆ ಕೊರತೆಯಾಗಿತ್ತು. 2018ರ ಮುಂಗಾರು ಪೂರ್ವದಲ್ಲಿ ವಾಡಿಕೆ ಮಳೆಗಿಂತ ಶೇ. 46ರಷ್ಟು ಮಳೆ ಜಾಸ್ತಿ ಬಿದ್ದಿತ್ತು. ಅಂದರೆ ವಾಡಿಕೆ ಮಳೆ 80 ಎಂಎಂ ಇತ್ತು. ಮಳೆಯಾಗಿದ್ದು 117 ಎಂಎಂ. 2019ರ ಮುಂಗಾರು ಪೂರ್ವದಲ್ಲಿ ವಾಡಿಕೆ ಮಳೆಗಿಂತ ಶೇ. 50 ರಷ್ಟು ಮಳೆ ಕಡಿಮೆಯಾಗಿದೆ.
ಈ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದಾಗ ಈ ಬಾರಿ ಮುಂಗಾರು ಬರೆ ಎಳೆಯುವ ಎಲ್ಲ ಲಕ್ಷಗಳು ಗೋಚರಿಸುತ್ತಿವೆ. ಮಳೆಯಿಲ್ಲದೆ ರೈತರು ತಮ್ಮ ಒಣ ಭೂಮಿಯನ್ನೊಮ್ಮೆ, ಬಿಸಿಲ ಸುರಿಸುತ್ತಿರುವ ಮೋಡವನ್ನೊಮ್ಮೆ ನೋಡುತ್ತಾ ತಮ್ಮ ಬದುಕು ನೆನೆದು ಚಿಂತಿಸುತ್ತಾ ಕುಳಿತುಕೊಳ್ತಿದಾರೆ. ಈ ವಾರದಲ್ಲಿ ಮಳೆಯಾಗದೆ ಹೋದರೆ ಮುಂಗಾರು ಬರೆ ಎಳೆಯುತ್ತದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.