ಗಂಗಾವತಿ: ಹಳ್ಳ-ಕೊಳ್ಳ, ಕಾಲುವೆ, ನದಿಗಳಲ್ಲಿ ಮೀನುಗಾರಿಕೆ ಮಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇದೀಗ ಗಂಗಾವತಿ ತಾಲೂಕಿನಲ್ಲಿ ರೈತರು ತಮ್ಮ ಹೊಲ ಗದ್ದೆಗಳಲ್ಲಿಯೂ ಸಹ ಮೀನು ಹಿಡಿಯುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆನೆಗೊಂದಿ ಪರಿಸರದಲ್ಲಿನ ಬೆಟ್ಟಗುಡ್ಡಗಳಿಂದ ಧುಮುಕುತ್ತಿರುವ ನೀರು ಸಮೀಪದ ನಾಲೆಗಳಿಗೆ ಸೇರುತ್ತಿದೆ. ಹೀಗಾಗಿ ನಾಲೆಗಳು ಅಲ್ಲಲ್ಲಿ ಒಡೆದು ಹೆಚ್ಚುವರಿ ನೀರು ಹೊಲ ಗದ್ದೆಗಳಿಗೆ ಹೋಗುತ್ತಿದೆ.
ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಬಿಡುಗಡೆ ಮಾಡಿರುವ ನೀರಿನಲ್ಲಿ ಮೀನು ಮತ್ತು ಮೀನಿನ ಮರಿಗಳಿದ್ದು, ಒಡೆದ ಕಾಲುವೆಯಿಂದ ಹರಿಯುತ್ತಿರುವ ನೀರು ಗದ್ದೆಗಳಿಗೆ ಸೇರುತ್ತಿದೆ. ಹೀಗಾಗಿ ಗದ್ದೆಗಳಲ್ಲಿ ಮೀನುಗಳು ಕಂಡು ಬಂದಿದ್ದು, ರೈತರು ಕುತೂಲಹದಿಂದ ಮೀನುಗಳನ್ನು ಹಿಡಿದು ಮನೆಗೆ ಒಯ್ಯುತ್ತಿದ್ದಾರೆ. ಮೀನು ಹಿಡಿಯದೆ ಹೋದರೆ ಮಣ್ಣಿನಲ್ಲಿ ಸಿಕ್ಕಿ ಸಾವನ್ನಪ್ಪುವ ಸಂಭವವಿದೆ. ಹೀಗಾಗಿ ರೈತರು ಮೀನು ಹಿಡಿಯುವಲ್ಲಿ ಮಗ್ನರಾಗಿದ್ದಾರೆ.