ಕೊಪ್ಪಳ: ನವೆಂಬರ್ 10 ರಿಂದ ಹನುಮಮಾಲಾ ಧಾರಣೆಯ ವ್ರತ ಆರಂಭವಾಗಲಿದ್ದು, ಡಿಸೆಂಬರ್ನಲ್ಲಿ ಮಾಲೆಯ ವಿಸರ್ಜನೆ ನಡೆಯಲಿದೆ. ಸಾವಿರಾರು ಹನುಮ ಮಾಲಾಧಾರಿಗಳು ಜಿಲ್ಲೆಯ ಅಂಜನಾದ್ರಿಗೆ ಬರುತ್ತಾರೆ. ಹೀಗಾಗಿ, ಹನುಮಮಾಲಾ ವಿಸರ್ಜನೆಗೆ ಜಿಲ್ಲಾಡಳಿತ ಅವಕಾಶ ನೀಡಬೇಕು ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸಂಜೀವ ಮರಡಿ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೊನಾ ಇದ್ದರೂ ರಾಜಕೀಯ ಕಾರ್ಯಕ್ರಮಗಳಿಗೆ, ಚುನಾವಣೆ ಪ್ರಚಾರಕ್ಕೆ ಸಾಕಷ್ಟು ಜನರು ಸೇರುತ್ತಾರೆ. ಅಂತಹವುಗಳಿಗೆ ಸರ್ಕಾರ ಅನುಮತಿ ನೀಡುತ್ತದೆ. ಆದರೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಯಾಕೆ ಅವಕಾಶ ನೀಡಲ್ಲವೆಂದು ಪ್ರಶ್ನಿಸಿದರು.
ನ.10ರಿಂದ 48 ದಿನಗಳ ಈ ವ್ರತದಲ್ಲಿ ರಾಜ್ಯದ ನಾನಾ ಕಡೆ ಸಾವಿರಾರು ಹನುಮಭಕ್ತರು ಮಾಲೆ ಧರಿಸುತ್ತಾರೆ. ಅಲ್ಲದೆ, ಮಾಲಾ ವಿಸರ್ಜನೆಗೆ ಅಂಜನಾದ್ರಿಗೆ ಬರುತ್ತಾರೆ. ಈ ಕುರಿತು ಜಿಲ್ಲಾಡಳಿತ ಈಗಲೇ ನಿರ್ಧಾರ ಪ್ರಕಟಿಸಬೇಕು. ಹನುಮಾಲಾ ವಿಸರ್ಜನೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಕೋವಿಡ್ ಮಾರ್ಗಸೂಚಿಯಂತೆಯೇ ಹನುಮ ಮಾಲಾ ವಿಸರ್ಜನೆ ಮಾಡುತ್ತೇವೆ. ಕೋವಿಡ್ ನೆಪವೊಡ್ಡಿ ಜಿಲ್ಲಾಡಳಿತ ಅವಕಾಶ ನೀಡದಿದ್ದರೂ ಮಾಲೆಯನ್ನು ವಿಸರ್ಜಿಸುತ್ತೇವೆ ಎಂದು ಸಂಜೀವ ಮರಡಿ ಹೇಳಿದರು.