ಗಂಗಾವತಿ(ಕೊಪ್ಪಳ) : ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಮೃತಪಟ್ಟವರಿಗೆ ಸರ್ಕಾರದ ಪರಿಹಾರ ಧನ ವಿತರಿಸಲು ತೆರಳಿದ್ದ ಕೊಪ್ಪಳ ಜಿಲ್ಲಾಧಿಕಾರಿ ಎಂ ಸುಂದರೇಶಬಾಬು ನಿರಾಶೆಯಾದ ಘಟನೆ ನಡೆಯಿತು.
ಘಟನೆ ನಡೆದು ಎರಡು ದಿನಗಳ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ, ಮೃತ ಪಾಷಾವಲಿ ಮತ್ತು ಯಂಕಪ್ಪ ತಳವಾರ ಅವರ ಮನೆಗೆ ಭೇಟಿ ನೀಡಿದ್ದರು. ಆದರೆ ಸಂತ್ರಸ್ತರ ಕುಟುಂಬದವರು ಮನೆಗೆ ಬೀಗ ಹಾಕಿ ಬೇರೆಡೆಗೆ ತೆರಳಿದ್ದು, ಕಂಡು ಬಂತು. ಹೀಗಾಗಿ ಪರಿಹಾರಧನ ವಿತರಿಸದೇ ಬರಿಗೈಯಲ್ಲಿ ಜಿಲ್ಲಾಧಿಕಾರಿ ವಾಪಸಾದರು.
ಗಾಯಾಳು ಧರ್ಮೇಂದ್ರ ನಿವಾಸಕ್ಕೆ ತೆರಳಿದ್ದ ಜಿಲ್ಲಾಧಿಕಾರಿ, ಐವತ್ತು ಸಾವಿರ ರೂಪಾಯಿ ಪರಿಹಾರ ವಿತರಿಸಿದರು. ಎರಡನೇ ಹಂತದಲ್ಲಿ ಮತ್ತೆ ಐವತ್ತು ಸಾವಿರ ಪರಿಹಾರ ನೀಡಲಾಗುವುದು ಎಂದು ಕುಟುಂಬಕ್ಕೆ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಬಳಿಕ ಮಾತನಾಡಿದ ಡಿಸಿ ಸುಂದರೇಶ ಬಾಬು, ಮೃತರ ಕುಟುಂಬಕ್ಕೆ 8.50 ಲಕ್ಷ ಮೊತ್ತದ ಪರಿಹಾರ ನೀಡಲಾಗುವುದು. ಸದ್ಯಕ್ಕೆ ಗ್ರಾಮದಲ್ಲಿನ ಜನರಿಗೆ ಸರ್ಕಾರದಿಂದ ಆಹಾರಧಾನ್ಯ ವಿತರಿಸಲಾಗುತ್ತಿದೆ. ಆ.16ರಿಂದ ಶಾಲೆ-ಕಾಲೇಜು ಆರಂಭಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಹುಲಿಹೈದರ ಕೋಮು ಘರ್ಷಣೆ: 22 ಜನರ ಬಂಧನ