ಕುಷ್ಟಗಿ(ಕೊಪ್ಪಳ): ತಾಲೂಕಿನ ತಾವರಗೇರಾ ಸಮುದಾಯ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬನಿಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಆಸ್ಪತ್ರೆಯ ಆರೋಗ್ಯ ಸಹಾಯಕನಿಗೆ ಸೋಂಕು ದೃಢಪಟ್ಟಿದೆ. ಇವರು ಜೂ. 13ಕ್ಕೆ ವಿಜಯಪುರಕ್ಕೆ ಹೋಗಿ, ಜೂ. 14ರ ತಡ ರಾತ್ರಿ ತಾವರಗೇರಾಕ್ಕೆ ಆಗಮಿಸಿ ಎಂದಿನಂತೆ ಜೂ.15ರಿಂದ ಆಸ್ಪತ್ರೆಯ ಸೇವೆಯಲ್ಲಿ ಕಾರ್ಯ ನಿರತನಾಗಿದ್ದಾರೆ. ಬಳಿಕ ನೆಗಡಿ, ಕೆಮ್ಮು, ಜ್ವರದ ಲಕ್ಷಣ ಕಂಡು ಬಂದ ಕಾರಣ ಆಸ್ಪತ್ರೆಯ ನರ್ಸ್ ಕಡೆಯಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ ಜ್ವರ, ಕೆಮ್ಮು ನಿಯಂತ್ರಣಕ್ಕೆ ಬಾರದ ಹಿನ್ನೆಲೆ, ಜೂ.19ಕ್ಕೆ ಗಂಟಲು ದ್ರವ ಪರೀಕ್ಷೆ ಮಾಡಿಸಿ ಕರ್ತವ್ಯ ನಿರ್ವಹಿಸಿದ್ದರು. ಸ್ವಯಂ ಕ್ವಾರಂಟೈನ್ ಕೂಡಾ ಆಗಿರಲಿಲ್ಲ.
ಜೂ.22ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸದ್ಯ ಆಸ್ಪತ್ರೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾವರಗೇರಾದಲ್ಲಿ ಇದು ಮೊದಲ ಸೋಂಕು ಪ್ರಕರಣವಾಗಿದ್ದು, ಜನತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ತಾವರಗೇರಾದಲ್ಲಿ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.