ಕುಷ್ಟಗಿ(ಕೊಪ್ಪಳ): ಕುಷ್ಟಗಿ ತಾಲೂಕಿನ ಕೂಡ್ಲೂರು- ಬಳೂಟಗಿ ನಡುವಿನ ಹಳ್ಳಕ್ಕೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸುವಂತೆ ಸಂಸದ ಕರಡಿ ಸಂಗಣ್ಣ ಅವರಿಗೆ ಸ್ಥಳೀಯರು ಮನವಿ ಮಾಡಿದರು.
ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿಗೆ ಆಗಮಿಸಿದ್ದ ಸಂಸದರು, ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಕೂಲಿ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಇಲ್ಲವೇ ಸೋಪಿನಿಂದ ಆಗಾಗ ಕೈ ತೊಳೆಯಬೇಕು. ಬಾಯಿ, ಕಣ್ಣು, ಮೂಗು ಅನ್ನು ಪದೇ ಪದೇ ಕೈಯಿಂದ ಮುಟ್ಟಿಕೊಳ್ಳಬಾರದು ಎಂದು ಸಲಹೆ ನೀಡಿದರು.
ನರೇಗಾ ಯೋಜನೆಯಲ್ಲಿ ಈ ಹಳ್ಳಕ್ಕೆ ನಿರ್ಮಿಸಿದ್ದ ನೆಲ ಹಾಸು ಕಲ್ಲುಗಳು ಕಿತ್ತು ಹೋಗಿವೆ. ಕೂಡ್ಲೂರು ಮತ್ತು ಬಳೂಟಗಿ ನಡುವಿನ ಸಂಪರ್ಕ ಕಡಿತಗೊಳ್ಳುವ ಸಾದ್ಯತೆ ಇದೆ. ಹೀಗಾಗಿ ನರೇಗಾ ಯೋಜನೆಯಲ್ಲಿ ರಸ್ತೆ ದುರಸ್ತಿಗೆ ಕ್ರಮವಹಿಸಲು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಮಹೇಶ, ನರೇಗಾ ಜೆಇ ವಿಜಯ್, ಗ್ರಾ.ಪಂ. ಸದಸ್ಯರು ಸೇರಿದಂತೆ ಇತರರು ಇದ್ದರು.