ಗಂಗಾವತಿ (ಕೊಪ್ಪಳ): ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪ್ರಕಟವಾದ ಮೀಸಲಾತಿ ಅವೈಜ್ಞಾನಿಕವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದೆ. ಪರಸ್ಪರ ದೊಣ್ಣೆ, ರಾಡ್ ಸೇರಿದಂತೆ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಕಾರಟಗಿ ತಾಲ್ಲೂಕಿನ ಬೂದಗುಂಪಾ ಗ್ರಾಮದಲ್ಲಿ ಇಂದು (ಭಾನುವಾರ) ಘಟನೆ ನಡೆಯಿತು.
ಗಂಭೀರ ಗಾಯಗೊಳಗಾದವರನ್ನು ಸಮುದಾಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಕಳುಹಿಸಲಾಗಿದೆ. ಸದ್ಯ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಣದ ಒಟ್ಟು 30ಕ್ಕೂ ಹೆಚ್ಚು ಜನರ ಮೇಲೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಪೂರ್ಣ ವಿವರ: ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪ್ರಕಟವಾದ ಮೀಸಲಾತಿ ಅವೈಜ್ಞಾನಿಕವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಲಿತ ವರ್ಗದ ಎರಡು ಗುಂಪಿನ ಮಧ್ಯೆ ಆರಂಭದಲ್ಲಿ ಮಾತಿನ ಚಕಮಕಿ ನಡೆದಿದೆ. ಇದನ್ನೇ ಪ್ರತಿಷ್ಠೆ ವಿಷಯವಾಗಿ ಸ್ವೀಕರಿಸಿದ ಮತ್ತೊಂದು ಗುಂಪು ನ್ಯಾಯಾಲಯಕ್ಕೆ ಹೋಗಿ ಎರಡನೇ ಅವಧಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ತಡೆ ತಂದಿರುವುದು ವಿವಾದಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಆಗಾಗ್ಗೆ ಗ್ರಾಮದ ಜನರಲ್ಲಿ ಮಾತಿನ ಚಕಮಕಿಗೆ ಕಾರಣವಾಗುತಿತ್ತು. ಅಲ್ಲದೇ ಈ ಹಿಂದಿನ ಚುನಾವಣೆಗಳಲ್ಲಿ ಘರ್ಷಣೆ, ರಾಜಕೀಯಪ್ರೇರಿತ ಗುಂಪುಗಾರಿಕೆಯೂ ನಡೆದಿತ್ತು. ದಲಿತ ಸಮುದಾಯದ ಎರಡು ಬಣಗಳಿಗೆ ಗ್ರಾಮದಲ್ಲಿನ ಸವರ್ಣೀಯರ ಗುಂಪು ಬೆಂಬಲ ನೀಡಿರುವುದು ವಿವಾದ ಭುಗಿಲೇಳಲು ಕಾರಣ ಎಂದು ಹೇಳಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಡ್ ಕಾನ್ಸ್ಟೇಬಲ್ ಸುರೇಶ ಎಂಬವರು ನೀಡಿದ ದೂರಿನ ಮೇರೆಗೆ ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರೇಶ ನಾಯಕ್, ದೇವರಾಜ ನಾಯಕ್, ಯಮನೂರು ನಾಯಕ, ಹನುಮಂತ ನಾಯಕ, ಗುರುನಾಯಕ್, ಆನಂದ ನಾಯಕ, ಮಹಾಂತೇಶ ನಾಯಕ, ಭೀಮೇಶ ಗೆಜ್ಜೆಹಳ್ಳಿ, ಶರಣಪ್ಪ ಬಂಡ್ರಾಳ, ಅಂಬ್ರೇಶ ನಾಯಕ್, ಬಸವರಾಜ ನಾಯಕ್ ಎಂಬವರ ಮೇಲೆ ದೂರು ದಾಖಲಾಗಿದೆ.
ಲಕ್ಷ್ಮಪ್ಪ ನಾಯಕ್, ಕರಿಯಪ್ಪ ಬೆಳ್ಳಿಕಟ್ಟಿ, ರಮೇಶ, ದೊಡ್ಡನಗೌಡ ಪಾಟೀಲ್, ಆನಂದ್ ಮಲ್ಲಿಗೌಡರ್, ಮಲ್ಲನಗೌಡ ಮಲ್ಲಿನಾಡರ್, ನಾಗನಗೌಡ, ವೀರೇಶ ಹೊಟ್ಟಿ, ಶರಣಪ್ಪ ಜೋಗಿನ್, ಮಂಜುನಾಥ ಜೋಗೀನ್, ಪಂಪಾಪತಿ ಕೆಂಡ, ರಮೇಶ ಡಂಬರ್, ದೇವರಾಜಗೌಡರ್, ಮಮಹೆಬೂಬ, ವಿನೋದ್ ಪೊಲೀಸ್ ಪಾಟೀಲ್, ಪಂಪಾಪತಿ ಕನಕಗಿರಿ, ಚನ್ನಪ್ಪ ಕಂಪ್ಲಿ ಹಾಗೂ ನಾಗರಾಜ್ ಕನಕಗಿರಿ ಸೇರಿದಂತೆ ಒಟ್ಟು 30 ಜನರ ಮೇಲೆ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Crab: ಬೆಳಗಾವಿಯಲ್ಲಿ ಏಡಿ ಖರೀದಿಗೆ ಮುಗಿಬಿದ್ದ ಜನರು; ಏಡಿ ಆರೋಗ್ಯಕ್ಕೆ ಒಳ್ಳೆಯದೇ? ನ್ಯೂಟ್ರಿಶಿಯನ್ ಹೇಳುವುದೇನು?