ಗಂಗಾವತಿ: ಕೊಪ್ಪಳ ಜಿಲ್ಲೆಯ ದಕ್ಷ ಅಧಿಕಾರಿಯಾಗಿದ್ದ ಡಿಸಿ ಪೊಮ್ಮಲ ಸುನಿಲ್ ಕುಮಾರ್ ವರ್ಗಾವಣೆ ವಿರೋಧಿಸಿ ನಗರಸಭಾ ಸದಸ್ಯ ಎಫ್. ರಾಘವೇಂದ್ರ ಅವರ ನೇತೃತ್ವದಲ್ಲಿ ಜನರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ವರ್ಗಾವಣೆ ವಿರೋಧಿಸಿದ ನಾನಾ ಸಂಘಟನೆಗಳ ಪ್ರಮುಖರು ಹಾಗೂ ನಾಗರಿಕರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ತಹಶೀಲ್ದಾರ್ ಚಂದ್ರಕಾಂತ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯ ರಾಘವೇಂದ್ರ, ಜಿಲ್ಲೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಮೊದಲ ದಿನದಿಂದ ಸುನಿಲ್ ಕುಮಾರ್ ದಕ್ಷತೆ ಮೆರೆದಿದ್ದಾರೆ. ಇಂತಹ ಅಧಿಕಾರಿಯ ಅಗತ್ಯತೆ ಕೊಪ್ಪಳ ಜಿಲ್ಲೆಗಿದೆ ಎಂದರು.
ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ಜಿಲ್ಲೆಯ ಜನರನ್ನು ಸುನಿಲ್ ಕುಮಾರ್ ಕಾಪಾಡಿದ ರೀತಿ, ಅವರ ದಕ್ಷತೆ, ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಕೂಡಲೇ ಅವರ ವರ್ಗಾವಣೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.