ಗಂಗಾವತಿ: ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಡ ಕುಟುಂಬದ ಎರಡು ಮಕ್ಕಳ ಬಗ್ಗೆ ಮಾಹಿತಿ ಪಡೆದ ಶಾಸಕ ಪರಣ್ಣ ಮುನವಳ್ಳಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಮುಖ್ಯಸ್ಥ ದುರುಗಪ್ಪ ಹಾಗೂ ಮಕ್ಕಳ ತಾಯಿ ಸಣ್ಣ ಮಾರೆಕ್ಕ ಅವರಿಗೆ ವೈಯಕ್ತಿಕ ನೆರವು ನೀಡಿದರು.
ನಗರದ 31ನೇ ವಾರ್ಡ್ ಸರೋಜಮ್ಮ ಕಲ್ಯಾಣ ಮಂಟಪದ ಹಿಂದೆ ವಾಸಿಸುವ ಹಗಲು ವೇಷಗಾರರ ಸಮುದಾಯಕ್ಕೆ ಸೇರಿದ ದುರುಗಪ್ಪ ಅವರ ಮೂರು ವರ್ಷದ ಮಗು ಹನುಮೇಶ ಹೃದಯ ಸಂಬಂಧಿ ಕಾಯಿಲೆಯಿಂದ ಹಾಗೂ ಹನ್ನೊಂದು ತಿಂಗಳ ಮಗು ದೀಪಿಕಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದೆ.
ಆರ್ಥಿಕವಾಗಿ ಕಡು ಬಡತನದಲ್ಲಿರುವ ಕುಟುಂಬ, ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಭೇಟಿ ನೀಡಿದ ಶಾಸಕರು, ಮಕ್ಕಳ ಚಿಕಿತ್ಸೆಗೆ ಏರ್ಪಾಟು ಮಾಡುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೇ ದುಬಾರಿ ವೆಚ್ಚವಾದರೆ ಸಿಎಂ ಪರಿಹಾರ ನಿಧಿ ಸಾಧ್ಯವಾದರೆ ಹಣಕಾಸು ವ್ಯವಸ್ಥೆ ಮಾಡಿಸುವುದಾಗಿ ಭರವಸೆ ನೀಡಿದರು.