ಕೊಪ್ಪಳ: ಬರಪೀಡಿತ ಜಿಲ್ಲೆಗಳ ಪ್ರವಾಸದಲ್ಲಿರುವ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಕೊಪ್ಪಳ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.
ಇಂದು ಬೆಳಗ್ಗೆ ಆರಂಭದಲ್ಲಿ ಕೊಪ್ಪಳ ಹೊರವಲಯದಲ್ಲಿನ ಹಿರೇಹಳ್ಳ ಪ್ರದೇಶಕ್ಕೆ ಭೇಟಿ ನೀಡಿದ ಬಿಎಸ್ವೈ, ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಿರೇಹಳ್ಳ ಸ್ವಚ್ಛಗೊಳಿಸಿದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಸ್ವಾಮೀಜಿ ಮಾಡಿರುವ ಈ ಕಾರ್ಯಕ್ಕೆ ರಾಜ್ಯದ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಆ ಬಳಿಕ ಮಾತನಾಡಿದ ಅವರು, ಸ್ವಾಮೀಜಿಗಳು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸುಮಾರು 24 ಕಿ.ಮೀ. ಹಿರೇಹಳ್ಳ ಸ್ವಚ್ಛಗೊಳಿಸಿದ್ದಾರೆ. ಹಿರೇಹಳ್ಳದಲ್ಲಿ ನೀರು ನಿಲ್ಲಿಸುವ ಯೋಜನೆ ರೂಪಿಸಿದ್ದಾರೆ. ಅಂತಹ ಮಹಾನ್ ಕಾರ್ಯ ಮಾಡಿರುವ ಶ್ರೀಗಳು ಪ್ರಶಂಸನಾರ್ಹರು ಎಂದು ಬಣ್ಣಿಸಿದರು. ಇನ್ನು ಪ್ರಸ್ತುತ ರಾಜ್ಯ ಸಮ್ಮಿಶ್ರ ಸರ್ಕಾರ ನೀರಾವರಿ ಯೋಜನೆಗಳನ್ನು ಕಡೆಗಣಿಸಿದೆ ಎಂದು ದೂರಿದರು.