ಗಂಗಾವತಿ: ನನ್ನ ಬೈಕ್ ಕಳುವಾಗಿದೆ, ದಯಮಾಡಿ ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆ, ಸ್ವತಃ ಮಾಲೀಕನೇ ತನ್ನ ಬೈಕನ್ನು ಪತ್ತೆ ಹಚ್ಚಿ ಕಳ್ಳರನ್ನು ಎಳೆತಂದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯ ಶ್ರೀರಾಮನಗರದಲ್ಲಿ ಭತ್ತದ ವ್ಯಾಪಾರಿಯಾಗಿರುವ ಚನ್ನಬಸವ ಜಕ್ಲಿ ಎರಡು ವಾರದ ಹಿಂದೆ ತಮ್ಮ ಅಂಗಡಿ ಮುಂದೆ ಜುಪಿಟರ್ ಬೈಕ್ ನಿಲ್ಲಿಸಿದ್ದರು. ಸ್ವಲ್ಪ ಸಮಯದ ಬಳಿಕ ನೋಡುವಾಗ ಆ ಬೈಕ್ ಕಳ್ಳತನವಾಗಿತ್ತು. ಕೂಡಲೇ ಗ್ರಾಮೀಣ ಪೊಲೀಸರ ಮೊರೆ ಹೋಗಿದ್ದ ಚನ್ನಬಸವ, ನನ್ನ ಬೈಕ್ ಹುಡುಕಿಕೊಡಿ ಎಂದು ಕೇಳಿಕೊಂಡಿದ್ದ. ಆದರೆ ಕಾಟಾಚಾರಕ್ಕೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸರಿ ನಿಮ್ಮ ಬೈಕ್ ಸಿಕ್ಕಾಗ ಹೇಳುತ್ತೇವೆ ಎಂದು ಕೈ ತೊಳೆದುಕೊಂಡಿದ್ದರು. ಹೀಗೆ 15 ದಿನ ಕಳೆದರೂ ಬೈಕ್ ಪತ್ತೆಯಾಗದ ಕಾರಣ ಬೇಸರಗೊಂಡ ವ್ಯಾಪಾರಿ, ತನಗಿರುವ ಎಲ್ಲಾ ಮೂಲಗಳ ಸಹಾಯ ಪಡೆದುಕೊಂಡು ಕಳೆದು ಹೋಗಿದ್ದ ಬೈಕ್ ಮರಳಿ ಪಡೆದುಕೊಂಡಿದ್ದು, ಬೈಕ್ ಕಳ್ಳರನ್ನು ಸಹ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೈಕ್ ದೊರೆತದ್ದು ಹೇಗೆ?:
ಶುಕ್ರವಾರದಂದು ಶ್ರೀರಾಮನಗರದಿಂದ ಗಂಗಾವತಿಗೆ ಚನ್ನಬಸವ ಹೊರಟಿದ್ದರು. ಈ ವೇಳೆ ವಿದ್ಯಾನಗರದ ಬಳಿ ಮೂವರು ಯುವಕರು ಪೆಟ್ರೋಲ್ ಮುಗಿದು ಹೋಗಿದ್ದ ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದರು. ಇದನ್ನು ವಾಹನದ ಕನ್ನಡಿಯಲ್ಲಿ ಗಮನಿಸಿದ ಮಾಲೀಕ, ಕೂಡಲೇ ಅವರ ಬಳಿ ತೆರಳಿ ವಾಹನ ಪರಿಶೀಲಿಸಿದ್ದಾರೆ. ಇದು ಕಳೆದ ಹೋಗಿದ್ದ ತನ್ನದೇ ಬೈಕು ಎಂದು ಪತ್ತೆಹಚ್ಚಿದ ವ್ಯಾಪಾರಿ ಚನ್ನಬಸವ, ತಕ್ಷಣ ಕಳ್ಳರನ್ನು ಹಿಡಿದು ನೆರವಿಗೆ ಕೂಗಿದ್ದಾರೆ. ಕೂಡಲೇ ಸ್ಥಳೀಯರು ಆಗಮಿಸಿದ್ದು, ಮೂವರು ಕಳ್ಳರ ಪೈಕಿ ಇಬ್ಬರನ್ನು ಹಿಡಿದು ಬೈಕ್ ಪಡೆದುಕೊಂಡಿದ್ದಾರೆ. ಈ ವೇಳೆ ಇನ್ನೋರ್ವ ತಪ್ಪಿಸಿಕೊಂಡು ಓಡಿ ಹೋಗಿದ್ದು, ಮತ್ತಿಬ್ಬರನ್ನು ಎಳೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನಾಸೀರ್ (17) ಸಂತೋಷ್ (18) ಎಂದು ಗುರುತಿಸಲಾಗಿದೆ. ಬೈಕ್ ಕಳ್ಳತನ ಪ್ರಕರಣದ ಕಿಂಗ್ ಪಿನ್ ಮೇಘರಾಜ್ ಎಂಬ ಯುವಕ ಜನರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು, ಇದೀಗ ಪೊಲೀಸರು ಈತನ ಸೆರೆಗೆ ಬಲೆ ಬೀಸಿದ್ದಾರೆ.