ಕೊಪ್ಪಳ: ಕೊಪ್ಪಳದಲ್ಲಿ ರಾತ್ರಿ ವೇಳೆ ಹಿಂಡು ಹಿಂಡಾಗಿ ಬರುವ ಕರಡಿಗಳು ಹೊಲಕ್ಕೆ ಲಗ್ಗೆಯಿಟ್ಟು, ಕಲ್ಲಂಗಡಿ ಹಣ್ಣುಗಳಿಗೆ ಹಾನಿ ಮಾಡುತ್ತಿವೆ. ಕರಡಿಗಳ ಕಾಟಕ್ಕೆ ರೈತರು ಕಂಗಾಲಾಗಿದ್ದಾರೆ.
ಕೊಪ್ಪಳ, ಯಲಬುರ್ಗಾ, ಕುಕನೂರು, ಕನಕಗಿರಿ ಹಾಗೂ ಗಂಗಾವತಿ ತಾಲೂಕಿನ ಸುಮಾರು 400 ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಲ್ಲಂಗಡಿ ಬೆಳೆಯುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆ ನಾಟಿ ಮಾಡಿ ಅದಕ್ಕೆ ಔಷಧ, ಗೊಬ್ಬರ ಹಾಕಿ ಪೋಷಿಸುತ್ತಿದ್ದಾರೆ. ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂಪಾಯಿಗೂ ಅಧಿಕ ಖರ್ಚು ಮಾಡಿರುವ ರೈತರು ಒಂದು ಲಕ್ಷಕ್ಕೂ ಅಧಿಕ ಆದಾಯ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ. ಆದ್ರೆ ಪ್ರತಿ ವರ್ಷವೂ ನೂರಾರು ರೈತರು ಬೆಳೆ ನಷ್ಟ ಅನುಭವಿಸಿ ಸಾಲಗಾರರಾಗುತ್ತಿದ್ದಾರೆ.
ಇದೀಗ ಕುಕನೂರು ತಾಲೂಕಿನ ವಟಪರ್ವಿ ಗ್ರಾಮದಲ್ಲಿ ವೆಂಕಟೇಶ ಎಂಬ ರೈತ ತಮ್ಮ ಎರಡು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಆದ್ರೆ ಕರಡಿ ದಾಳಿಯಿಂದ ಬೆಳೆ ಸಂಪೂರ್ಣ ನಾಶವಾಗಿ ಈಗ ಲಕ್ಷಾಂತರ ರೂಪಾಯಿಯ ಸಾಲಗಾರರಾಗಿದ್ದಾರೆ. ಇದು ಕೇವಲ ಒಬ್ಬ ರೈತನ ಸಮಸ್ಯೆಯಲ್ಲ. ಕೊಪ್ಪಳ, ಕುಕನೂರು, ಯಲಬುರ್ಗಾ, ಗಂಗಾವತಿ ಹಾಗೂ ಕನಕಗಿರಿ ತಾಲೂಕಿನ ರೈತರ ಸಮಸ್ಯೆಯಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕರಡಿಗಳ ಸಂತತಿ ಅಧಿಕವಾಗಿದ್ದು, ಹಿರೇಸೂಳಿಕೇರಿ ಗ್ರಾಮದ ಬಳಿಯ 800 ಎಕರೆ ಪ್ರದೇಶದಲ್ಲಿ ಕರಡಿ ಧಾಮ ಸ್ಥಾಪನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೂ ಸರ್ಕಾರದಿಂದ ಒಪ್ಪಿಗೆ ದೊರಕಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 123 ರೈತರ ನೂರಾರು ಎಕರೆಯಲ್ಲಿ ಬೆಳೆಹಾನಿ ಆಗಿದೆ. ಇನ್ನೂ ಇಬ್ಬರು ಕರಡಿ ದಾಳಿಯಿಂದ ಸಾವನ್ನಪ್ಪಿದ್ದರೆ, 27 ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಮಂಡ್ಯ ಮೆಡಿಕಲ್ ಕಾಲೇಜಿನ 9 ವಿದ್ಯಾರ್ಥಿನಿಯರಲ್ಲಿ ಕೋವಿಡ್
ಬೆಳೆದ ಬೆಳೆಯನ್ನು ನಾಶ ಮಾಡುವ ಕರಡಿಗಳಿಂದಾಗಿ ಜಿಲ್ಲೆಯಲ್ಲಿ ರೈತರ ನೆಮ್ಮದಿ ಹಾಳಾಗಿದೆ. ಅರಣ್ಯ ಇಲಾಖೆಯು ಕರಡಿಗಳ ಕುರಿತು ಸಮೀಕ್ಷೆ ನಡೆಸಿ ಇಲ್ಲಿ ಕರಡಿ ಧಾಮ ಸ್ಥಾಪಿಸಿ, ಸಮಸ್ಯೆ ಪರಿಹರಿಸಬೇಕೆಂಬುದು ರೈತರ ಆಗ್ರಹವಾಗಿದೆ.