ಕುಷ್ಟಗಿ: ತಾಲೂಕಿನ ಗಡಿಗ್ರಾಮ ಹೊನಗಡ್ಡಿ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರು ಈಗ ತಲೆಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ.
ಗ್ರಾಮದ ಹೊರವಲಯದಲ್ಲಿ ರೈತ ಶರಣಪ್ಪ ಮ್ಯಾದನೇರಿ ಅವರು ಎರಡೆಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಈ ಬೆಳೆಗೆ ಬೀಜ, ಗೊಬ್ಬರ, ಪ್ಲಾಸ್ಟಿಕ್ ಮಲ್ಚಿಂಗ್ ಸೇರಿದಂತೆ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ ಖರ್ಚು ಮಾಡಿದ್ದರು. ಕಲ್ಲಂಗಡಿ ಉತ್ತಮ ಫಸಲು ಬಂದಿದೆ. ಆದರೆ ಫಸಲು ರೈತನ ಕೈಸೇರುವ ಮೊದಲೇ ಕರಡಿಗಳ ಪಾಲಾಗಿದೆ.
ಹಣ್ಣಾಗುವ ಹಂತದಲ್ಲಿರುವ ಕಲ್ಲಂಗಡಿ ಫಸಲಿಗೆ ಕರಡಿಗಳ ಹಿಂಡು ದಾಳಿ ಇಟ್ಟಿದ್ದು, ಹಣ್ಣು ತಿಂದಿರುವುದಕ್ಕಿಂತ ಫಸಲು ಕೆಡಿಸಿದ್ದೇ ಹೆಚ್ಚಾಗಿದೆ. ಪ್ರತಿ ವರ್ಷ ಈ ಸೀಜನ್ನಲ್ಲಿ ಕರಡಿ ದಾಳಿ ನಡೆಸುತ್ತಿರುವುದು ರೈತರನ್ನು ಕಂಗಾಲಾಗಿಸಿದೆ. ಕರಡಿ ಬರದಂತೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಉಪಟಳ ನಿಂತಿಲ್ಲ.
ಅರಣ್ಯ ಇಲಾಖೆ ಕರಡಿ ದಾಳಿ ಸಂದರ್ಭದಲ್ಲಿ ಭೇಟಿ ನೀಡಿ, ಕರಡಿ ಬೋನು ಅಳವಡಿಸುವುದನ್ನು ಹೊರತು ಪಡಿಸಿದರೆ, ವನ್ಯಜೀವಿ ಕರಡಿಗಳ ನಿಯಂತ್ರಣ ಸಾಧ್ಯವಾಗಿಲ್ಲ. ಕುಷ್ಟಗಿ, ಯಲಬುರ್ಗಾ, ಗಂಗಾವತಿ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಹೊನಗಡ್ಡಿ, ಗಾಣದಾಳ, ಗೌರಿಪುರ ಪ್ರದೇಶದಲ್ಲಿ ಗುಡ್ಡಗಾಡು ಪ್ರದೇಶವಿದೆ. ಇಲ್ಲಿ ಕರಡಿಗಳ ಚಲನವಲನವಿದ್ದು, ಬೋನು ಅಳವಡಿಸಿ ಕರಡಿಗಳ ಹಾವಳಿ ನಿಯಂತ್ರಿಸಬೇಕೆನ್ನುವುದು ರೈತರ ಆಗ್ರಹ. ಕಳೆದ ವರ್ಷವೂ ಕರಡಿಗಳು ಕಲ್ಲಂಗಡಿ ಫಸಲು ಹಾಳು ಮಾಡಿದ್ದವು.
ಇದನ್ನೂ ಓದಿ : ಬೆಳಗಾವಿಯಲ್ಲಿ ಪಟಾಕಿ ಸಿಡಿದು ರಥಕ್ಕೆ ಬೆಂಕಿ, ತಪ್ಪಿದ ಅನಾಹುತ