ಗಂಗಾವತಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ನೆರವೇರಿಸುತ್ತಿರುವ ಹಿನ್ನೆಲೆ, ತಾಲೂಕಿನ ಆನೆಗೊಂದಿಯಲ್ಲಿ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣ ಮಾಡಲಾದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.
ಹಂಪಿಯನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಆಳ್ವಿಕೆ ಮಾಡುತ್ತಿದ್ದ ವಿಜಯನಗರದ ಅರಸರ ಕಾಲದಲ್ಲಿ, ಅಂದರೆ ಕ್ರಿ.ಶ.1328ರಲ್ಲಿ ಆನೆಗೊಂದಿ ಗ್ರಾಮದಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ವಿಜಯನಗರ ಸಾಮ್ರಾಜ್ಯಕ್ಕೆ ಹಂಪಿ ರಾಜಧಾನಿಯಾಗುವುದಕ್ಕಿಂತಲೂ ಮೊದಲು ಆನೆಗೊಂದಿ ರಾಜಧಾನಿಯಾಗಿತ್ತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಹೀಗಾಗಿ ಮೂಲ ರಾಜಧಾನಿಯಲ್ಲಿ ಅರಸರು ರಾಮ ಮಂದಿರ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ.
ಇದೀಗ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸುತ್ತಿರುವ ಹಿನ್ನೆಲೆ, ಗ್ರಾಮದಲ್ಲಿರುವ ಐದು ಶತಮಾನಗಳಷ್ಟು ಹಳೆಯ ದೇಗುಲದಲ್ಲಿ ಬೆಳಗ್ಗೆ ಏಳು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಭಕ್ತರು ಪಾಲ್ಗೊಳ್ಳುವಂತೆ ದೇಗುಲದ ಸಮಿತಿ ಮನವಿ ಮಾಡಿದೆ.