ಗಂಗಾವತಿ(ಕೊಪ್ಪಳ): ವೈಯಕ್ತಿಕ ಶೌಚಾಲಯ ಬಳಕೆ ಹಾಗೂ ಬಚ್ಚಲು ಮನೆಯ ನೀರನ್ನು ರಸ್ತೆಗೆ ಬಿಡದಿರುವುದು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಗರಕ್ಕೆ ಸಮೀಪದ ಸೂರ್ಯನಾಯಕನ ತಾಂಡಾದಲ್ಲಿನ ಲಂಬಾಣಿ ಸಮುದಾಯದ ಜನ ವಿಭಿನ್ನ ಯತ್ನ ನಡೆಸಿದರು.
ಮಹಿಳೆಯರು ಭಿತ್ತಿ ಪತ್ರಗಳನ್ನು ಹಿಡಿದು ಗ್ರಾಮದ ಮಧ್ಯ ಭಾಗದಲ್ಲಿರುವ ವೃತ್ತಕ್ಕೆ ಆಗಮಿಸಿ ನಾವು ವೈಯಕ್ತಿಕ ಶೌಚಾಲಯ ಬಳಕೆ ಮಾಡುವ ಮೂಲಕ ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡುತ್ತೇವೆ. ಬಚ್ಚಲು ಮನೆಯ ನೀರನ್ನು ಸಾರ್ವಜನಿಕ ರಸ್ತೆಗೆ ಬಿಟ್ಟು ಜನರ ವಾಹನ ಓಡಾಟಕ್ಕೆ ತೊಂದರೆಯಾಗದಂತೆ ಮಾಡಲು ಇಂಗುಗುಂಡಿ ನಿರ್ಮಾಣ ಮಾಡಿಕೊಳ್ಳುತ್ತೇವೆ. ಇದರಿಂದ ಭೂಮಿಯಲ್ಲಿನ ಅಂತರ್ಜಲವೂ ವೃದ್ಧಿಯಾಗುತ್ತದೆ ಎಂಬ ಸಂದೇಶ ಸಾರಿದರು.
ಬಸವಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಜನರಲ್ಲಿ ಸಾಮಾಜಿಕ ಮತ್ತು ಆಂತರಿಕ ಅರಿವು ಮೂಡಿಸುವ ಉದ್ದೇಶಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ. ಮೋಹನ್ ನಿರಂತವಾಗಿ ಗ್ರಾಮಕ್ಕೆ ಭೇಟಿ ನೀಡಿ, ಜನರಲ್ಲಿ ಪ್ರೇರಣೆ ಮೂಡಿಸುತ್ತಿದ್ದಾರೆ.