ಕೊಪ್ಪಳ : ಪ್ರತಿಭಾವಂತ ಯುವಕನೊಬ್ಬ ಬಡತನದಲ್ಲೇ ಕಷ್ಟಪಟ್ಟು ಓದಿ ನೀಟ್ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದಿದ್ದಾರೆ. ಆದರೆ ತಮ್ಮ ವೈದ್ಯಕೀಯ ಅಧ್ಯಯನಕ್ಕೆ ಸರ್ಕಾರಿ ಶುಲ್ಕ ಪಾವತಿಸಲಾಗದೆ ಪರದಾಡುತ್ತಿದ್ದಾರೆ.
ಜಿಲ್ಲೆಯ ಜಿನ್ನಾಪುರ ಎನ್ನುವ ಪುಟ್ಟ ಗ್ರಾಮದ ಪ್ರಶಾಂತ ಚಂಡೂರ ಎಂಬ ಯುವಕ, ತಮ್ಮ ಮನೆಯಲ್ಲಿ ಕಡು ಬಡತನ ಇದ್ದರೂ ಕಷ್ಟ ಪಟ್ಟು ಓದಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾರೆ. ತಾಯಿ ಕೂಲಿ ಕೆಲಸ ಮಾಡಿಕೊಂಡು ಬಂದು ನೀಡಿದ ಹಣದಲ್ಲೇ ವಿದ್ಯಾಭ್ಯಾಸ ಮಾಡಿ, ಸದ್ಯ ನೀಟ್ ಪರೀಕ್ಷೆಯಲ್ಲಿ 68039ನೇ ರ್‍ಯಾಂಕ್ ಪಡೆದಿದ್ದಾರೆ. ಅದಲ್ಲದೆ ಕೊಡಗು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಗಿಟ್ಟಿಸಿಕೊಂಡಿದ್ದಾರೆ. ಆದರೆ ಯುವಕನ ಬಳಿ ಸರ್ಕಾರಿ ಶುಲ್ಕ ಪಾವತಿಸಲೂ ಸಹ ಹಣ ಇಲ್ಲದಾಗಿದೆ. ಕಷ್ಟ ಪಟ್ಟು ಓದಿರುವ ಪ್ರಶಾಂತ್ಗೆ ಉನ್ನತ ವ್ಯಾಸಂಗ ಮಾಡಲು ಬಡತನ ಅಡ್ಡಿಯಾಗಿದೆಯಂತೆ.
ಕಡುಬಡತನದಲ್ಲಿ ಅರಳಿದ ಪ್ರತಿಭೆ : ಶಾಲಾ ದಿನಗಳಿಂದಲೂ ಪ್ರಶಾಂತ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಎಲ್ಲಾ ವಿಷಯಗಳಲ್ಲೂ ಸದಾ ಮುಂದಿರುತ್ತಿದ್ದರು. ಇವರ ಮನೆಯಲ್ಲಿನ ಬಡತನವನ್ನು ಕಂಡ ಶಿಕ್ಷಕರು ಅಂದು 5ನೇ ತರಗತಿಯ ನಂತರ ಆದರ್ಶ ಶಾಲೆಗೆ ಸೇರಿಸಿದ್ದರು. ಬಳಿಕ ಎಸ್ ಎಸ್ ಎಲ್ ಸಿಯಲ್ಲಿ ಪ್ರಶಾಂತ್ ಉತ್ತಮ ಅಂಕ ಪಡೆಯುತ್ತಾರೆ. ನಂತರ ಗವಿಸಿದ್ದೇಶ್ವರ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ವ್ಯಾಸಂಗ ಮಾಡಿ ಪಿಯುಸಿಯಲ್ಲೂ ಉತ್ತಮ ಅಂಕ ಗಳಿಸುತ್ತಾರೆ. ನಂತರ ತನ್ನ ಗುರಿಯಂತೆ ಡಾಕ್ಟರ್ ಆಗಲು ನೀಟ್ ಪರೀಕ್ಷೆಗೆ ತಯಾರಿ ನಡೆಸಿ, ಯಾವುದೇ ಕೋಚಿಂಗ್ ಪಡೆಯದೇ ಕೇವಲ ಯೂಟ್ಯೂಬ್ ನಲ್ಲಿಯೇ ಕ್ಲಾಸ್ಗಳನ್ನು ಕೇಳಿ ನೀಟ್ ಪರೀಕ್ಷೆ ಬರೆಯುತ್ತಾರೆ.
ಡಾಕ್ಟರ್ ಆಗುವ ಕನಸು ಹೊತ್ತ ಯುವಕ : ಮೊದಲ ಬಾರಿ ನೀಟ್ ಪರೀಕ್ಷೆ ಬರೆದಾಗ ರ್‍ಯಾಂಕ್ ಬಂದಿರಲಿಲ್ಲ. ಆದರೆ ಛಲಬಿಡದ ಯುವಕ ಮತ್ತೆ ಪರೀಕ್ಷೆ ಬರೆದು ರ್‍ಯಾಂಕ್ ಪಡೆಯುತ್ತಾರೆ. ಜೊತೆಗೆ ಸರ್ಕಾರಿ ಕಾಲೇಜಿನಲ್ಲಿ ವೈದ್ಯಕೀಯ ಸೀಟ್ ಗಿಟ್ಟಿಸಿಕೊಳ್ಳುತ್ತಾರೆ. ಆದ್ರೆ ಸದ್ಯ ಯುವಕನ ಬಳಿ ಸರ್ಕಾರಿ ಶುಲ್ಕ ಪಾವತಿಸಲು ಹಣವಿಲ್ಲದೆ ಪರದಾಡುತ್ತಿದ್ದು, ಈ ಪ್ರತಿಭಾವಂತ ವಿದ್ಯಾರ್ಥಿಯು ವೈದ್ಯಕೀಯ ಶಿಕ್ಷಣಕ್ಕೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ : ಸರ್ಕಾರಿ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ಈ ಬಾರಿಯೂ ಇಲ್ಲ ಸೈಕಲ್ ಭಾಗ್ಯ