ಕೊಪ್ಪಳ: ಕಿಷ್ಕಿಂಧೆ ನಾಡು ಕೊಪ್ಪಳದಲ್ಲೊಬ್ಬ ವಿಶಿಷ್ಠ ಹನುಮ ಭಕ್ತರಿದ್ದಾರೆ. ಇವರು ಪ್ರತಿದಿನವೂ ಒಂದೊಂದು ಹನುಮನ ಮೂರ್ತಿ ತಯಾರಿಸಿಯೇ ತಮ್ಮ ಮುಂದಿನ ಕೆಲಸ ಆರಂಭಿಸ್ತಾರೆ. ಇದೇನು ಇಂದು ನಿನ್ನೆಯ ಕಾಯಕವಲ್ಲ. ಬರೋಬ್ಬರಿ 14 ವರ್ಷಗಳಿಂದ ಅವರು ತಮ್ಮ ವಿಶಿಷ್ಟ ಕಾಯಕ ನಡೆಸಿಕೊಂಡು ಬರುತ್ತಿದ್ದಾರೆ.
ನಿತ್ಯವೂ ಒಂದೊಂದು ಹನುಮನ ಮೂರ್ತಿ ತಯಾರಿಸಿದ ಬಳಿಕವೇ, ತಮ್ಮ ಮುಂದಿನ ಕೆಲಸಕ್ಕೆ ಅಣಿಯಾಗುವ ಕೊಪ್ಪಳ ನಗರದ ಈ ಹನುಮ ಭಕ್ತನ ಹೆಸರು ಪ್ರಕಾಶ್ ಶೇಖಣಾಚಾರ್ಯ ಶಿಲ್ಪಿ. ಶಿಲೆಯಲ್ಲಿ ನಿತ್ಯವೂ ಒಂದು ಹನುಮನ ಮೂರ್ತಿ ತಯಾರಿಸುವುದು ಇವರ ಪೂಜೆ-ಜಪ-ತಪವಾಗಿದೆ.
ಪ್ರಕಾಶ್ ಅವರ ತಂದೆ ಶೇಖಣಾಚಾರ್ಯ ಹನುಮನ ಪರಮ ಭಕ್ತರಾಗಿದ್ದವರು. ಅವರ ನಿಧನದ ಬಳಿಕ ತಂದೆಯ ಮೇಲಿನ ಭಕ್ತಿ ಹಾಗೂ ಅವರ ನೆನಪು ಚಿರಸ್ಥಾಯಿಯಾಗಲಿ ಎಂಬ ಸಂಕಲ್ಪದೊಂದಿಗೆ ಇವರು, 2007 ಜನವರಿ 26 ರಿಂದ ಪ್ರತಿ ದಿನವೂ ಒಂದೊಂದು ಶಿಲೆಯಲ್ಲಿ ಆಂಜನೇಯ ಮೂರ್ತಿ ತಯಾರಿಸುತ್ತಾ ಬಂದಿದ್ದಾರೆ.
ಕಳೆದ 14 ವರ್ಷದಿಂದ ಈ ಸಂಕಲ್ಪ ನಿರಂತರವಾಗಿ ಮುಂದುವರೆದಿದೆ. ಈಗ ಅವರ ಮನೆಯಲ್ಲಿ ಸುಮಾರು 5 ಸಾವಿರದಷ್ಟು ಹನುಮ ಮೂರ್ತಿಗಳು ವಿರಾಜಮಾನವಾಗಿವೆ. ಸಂಕಲ್ಪದಂತೆ ಪ್ರಕಾಶ್ ಶಿಲ್ಪಿ ಅವರು ಎಲ್ಲೇ ಇದ್ದರೂ ಸಹ ಅಲ್ಲಿಯೇ ಒಂದು ಶಿಲಾ ಹನುಮನ ಮೂರ್ತಿ ತಯಾರಿಸಿದ ಬಳಿಕವೇ, ತಮ್ಮ ಮುಂದಿನ ಕೆಲಸ ಪ್ರಾರಂಭಿಸುತ್ತಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದೊಂದು ಮೂರ್ತಿ ತಯಾರಿಸುವ ಸಂಕಲ್ಪ ಇವರದ್ದಾಗಿದೆ.
ದೇಶದಲ್ಲಿ ಹೆಚ್ಚು ಜನರ ಆರಾಧ್ಯ ದೈವವಾಗಿರುವ ಪವನಸುತನ ಬಗ್ಗೆ ಪ್ರಕಾಶ ಶಿಲ್ಪಿ ಅವರಿಗಿರುವ ಭಕ್ತಿ ಆಸ್ತಿಕರಿಗೆ ಪ್ರೇರಣೆ ನೀಡುತ್ತದೆ. ಇದರ ಜೊತೆಗೆ,ಇವರು ತಮ್ಮ ಕಾಯಕದಲ್ಲೂ ಭಕ್ತಿಮಾರ್ಗವನ್ನು ಅನುಸರಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.