ಕೊಪ್ಪಳ: ಕೇಂದ್ರ ಸರ್ಕಾರ ದೇಶದ ನಾಗರಿಕರಿಗೆ ಸರ್ಕಾರಿ ಸೌಲಭ್ಯ ಸೇರಿದಂತೆ ವ್ಯಕ್ತಿ ಗುರುತಿಗಾಗಿ ಆಧಾರ್ ಕಾರ್ಡ್ ಜಾರಿಗೆ ತಂದಿದ್ದು, ಒಬ್ಬ ಪ್ರಜೆಗೆ ಒಂದೇ ನಂಬರಿನ ಕಾರ್ಡ್ ವಿತರಿಸಿದೆ. ಆದರೆ ಇಲ್ಲಿ ಇಬ್ಬರ ಹೆಸರಲ್ಲಿ ಒಂದೇ ಆಧಾರ್ ನಂಬರ್ ಜನರೇಟ್ ಆಗಿದ್ದು, ಒಬ್ಬರ ಖಾತೆಗೆ ಜಮಾ ಮಾಡಿದ ಹಣ ಇನ್ನೊಬ್ಬರ ಖಾತೆಗೆ ಹೋಗಿ ಕ್ರೆಡಿಟ್ ಆಗುತ್ತಿದೆ.
ಹೌದು, ಕೊಪ್ಪಳ ಜಿಲ್ಲೆಯಲ್ಲಿ ಇಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ಅಂದಪ್ಪ ತಿಗರಿ ಹಾಗೂ ಅದೇ ಗ್ರಾಮದ ಯಲ್ಲಮ್ಮ ವಾಲಿಕಾರ ಎಂಬುವವರ ಆಧಾರ್ ಕಾರ್ಡ್ ಸಂಖ್ಯೆ ಒಂದೇ ಆಗಿದೆ.
ಕಳೆದ ಒಂದೂವರೆ ವರ್ಷದಿಂದಲೇ ಸಮಸ್ಯೆ: ಕಳೆದ ಒಂದೂವರೆ ವರ್ಷದ ಹಿಂದೆ ಇಬ್ಬರದು ಆಧಾರ್ ಸಂಖ್ಯೆ ಒಂದೇ ಆಗಿರುವುದು ಬೆಳಕಿಗೆ ಬಂದಿತ್ತು. ಅಂದಪ್ಪ ಅವರ ಖಾತೆಯಿಂದ ಈ ಹಿಂದೆ 1500 ರೂಪಾಯಿ ಡ್ರಾ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಆಧಾರ್ ಸಂಖ್ಯೆಯ ಆಧಾರದ ಮೇಲೆ ಯಲ್ಲಮ್ಮ ಅವರು ಹಣ ಡ್ರಾ ಮಾಡಿದ್ದರು. ಹಣ ಅಂದಪ್ಪ ತಿಗರಿ ಅವರ ಖಾತೆಯಿಂದ ಕಡಿತವಾಗಿ ಮೊಬೈಲ್ಗೆ ಸಂದೇಶ ಬಂದಿತ್ತು. ತಾವು ಡ್ರಾ ಮಾಡದೆ ಹಣ ಕಡಿತವಾಗಿದ್ದರಿಂದ ಬ್ಯಾಂಕಿಗೆ ಹೋಗಿ ವಿಚಾರಿಸಿದ್ದಾರೆ. ಆಗ ಆಧಾರ ಬೇಸ್ಡ್ ಹಣ ಡ್ರಾ ಮಾಡಿದ್ದು ಗೊತ್ತಾಗಿದೆ. ಆಗ ಯಲ್ಲಮ್ಮ ವಾಲಿಕಾರ ಹಾಗೂ ಅಂದಪ್ಪ ತಿಗರಿ ಅವರ ಆಧಾರ್ ಸಂಖ್ಯೆ ಒಂದೇ ಆಗಿರುವುದು ಬೆಳಕಿಗೆ ಬಂದಿದೆ.
ಪರಿಹಾರ ಸೂಚಿಸದ ಆಧಾರ್ ಕೇಂದ್ರಗಳು: ಸದ್ಯ ಯಲ್ಲಮ್ಮ ವಾಲಿಕಾರ ಅವರ ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆ. ಆದರೆ ಅಂದಪ್ಪ ತಿಗರಿ ಅವರ ಆಧಾರ ಅಪ್ಡೇಟ್ ಆಗಿಲ್ಲ. ಇದರಿಂದಾಗಿ ಅಂದಪ್ಪ ಅವರು ಬ್ಯಾಂಕ್ ವ್ಯವಹಾರ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತವಾಗಬೇಕಾಗಿದೆ. ಅಲ್ಲದೆ ಮಕ್ಕಳ ಶಾಲೆಯ ಸೌಲಭ್ಯಗಳಿಗೂ ಅಡಚಣೆಯಾಗುತ್ತಿದೆ. ಆಧಾರ್ ನಂಬರ್ ಒಂದೇ ಆಗಿರುವುದರಿಂದ ಅಂದಪ್ಪ ತಿಗರಿ ಹಾಗೂ ಕುಟುಂಬದವರು ತೊಂದರೆ ಅನುಭವಿಸುವಂತಾಗಿದೆ. ಆಗಿರುವ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಆಧಾರ್ ಕೇಂದ್ರಕ್ಕೆ ಅಲೆದಾಡಿದರು ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಅಂದಪ್ಪ ಅಳಲು ತೋಡಿಕೊಂಡಿದ್ದಾರೆ.
ತಾಂತ್ರಿಕ ದೋಷದಿಂದಾದ ಸಮಸ್ಯೆ: ಇಬ್ಬರ ಆಧಾರ್ ಸಂಖ್ಯೆ ಒಂದೇ ಆಗಿರುವ ವಿಷಯದಲ್ಲಿ ಈ ಇಬ್ಬರದ್ದು ತಪ್ಪಿಲ್ಲ. ಇದು ತಾಂತ್ರಿಕ ದೋಷದಿಂದ ಆಗಿರುವ ಸಮಸ್ಯೆಯಾಗಿದೆ. ಈ ಸಮಸ್ಯೆ ಬಗೆಹರಿಸಿಕೊಳ್ಳಲು ಅಂದಪ್ಪ ಓಡಾಡುತ್ತಿದ್ದರೂ ಆಧಾರ್ ಕೇಂದ್ರದವರು ಸಮಸ್ಯೆ ಬಗೆಹರಿಸುತ್ತಿಲ್ಲ. ಬೆಂಗಳೂರಿಗೆ ಹೋಗಬೇಕು ಎಂದು ಹೇಳುತ್ತಿದ್ದಾರಂತೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಇಲ್ಲಿಯೇ ಸಮಸ್ಯೆ ಸರಿಪಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಏಳುಕೋಟೇಶ್ ಕೋಮಲಾಪುರ ಮಾಧ್ಯಮದವರ ಮೂಲಕ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಸೇವಾಕೇಂದ್ರಗಳ ಕೊರತೆ.. ದಿನವಿಡಿ ಕ್ಯೂ ನಲ್ಲಿ ನಿಂತು ಸುಸ್ತಾದ ಹಾವೇರಿ ಮಂದಿ-ವಿಡಿಯೋ