ಗಂಗಾವತಿ: ತಾನು ಖರೀದಿಸಿದ ಹೊಲದಲ್ಲಿ ಬೆಳೆದ ಮೊದಲ ಬೆಳೆಯನ್ನು ಸರ್ವ ಸಮುದಾಯಕ್ಕೆ ಸಲ್ಲಬೇಕು ಎಂಬ ವಿಶಾಲ ಮನೋಭಾವನೆ ಹೊಂದಿರುವ ಮುಸ್ಲಿಂ ರೈತರೊಬ್ಬರು, ಜಾತಿ - ಮತ - ಪಂಥಗಳ ಬೇಧವಿಲ್ಲದೇ ನಿತ್ಯ ತ್ರಿವಿಧ ದಾಸೋಹ ನಡೆಸುವ ಕೊಪ್ಪಳದ ಗವಿಮಠಕ್ಕೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ನಗರದ ಉಳ್ಳಿಡಗ್ಗಿಯ ನಿವಾಸಿ ಮೆಹಬೂಬ್ ಪಾಷಾ ಎಂಬ ಯುವಕ ಕನಕಗಿರಿ ಸಮೀಪದ ಲಕ್ಕುಂಪಿ ಗ್ರಾಮದ ಬಳಿ ಇತ್ತೀಚೆಗೆ ಮೂರು ಎಕರೆ ಹೊಲ ಖರೀದಿಸಿದ್ದರು. ಇದರಲ್ಲಿ ಒಂದು ಎಕರೆ ನಿರುಪಯುಕ್ತ ಭೂಮಿ ಇದ್ದು, ಕೇವಲ ಎರಡು ಎಕರೆಯಲ್ಲಿ ಸಜ್ಜೆ ಬಿತ್ತನೆ ಮಾಡಿದ್ದರು. ಎರಡು ಎಕರೆಯಿಂದ ಒಟ್ಟು 16 ಕ್ವಿಂಟಾಲ್ ಸಜ್ಜಿ ಬೆಳೆದಿದ್ದಾರೆ. ತನ್ನ ಹೊಲದಲ್ಲಿ ಬೆಳೆದಿದ್ದ ಮೊದಲ ಸಜ್ಜೆ ಧಾನ್ಯವನ್ನು ಸಮಾಜಕ್ಕೆ ಅರ್ಪಿಸುವ, ಮುಖ್ಯವಾಗಿ ಒಳ್ಳೆಯ ಕಾರ್ಯಕ್ಕೆ ಬಳಕೆಯಾಗಬೇಕು ಎಂಬ ಉದ್ದೇಶ ಯುವಕ ಹೊಂದಿದ್ದ.
ಈ ಸಂದರ್ಭದಲ್ಲಿ ಉದ್ಯಮಿ ಆನಂದ್ ಅಕ್ಕಿ ಎಂಬುವವರ ಬಳಿ ಸಲಹೆ ಕೇಳಿದ್ದಾರೆ. ಯಾವುದಾದರೂ ಮಠ - ಮಾನ್ಯಗಳಿಗೆ ನೀಡಿದರೆ ನಿಮ್ಮ ಉದ್ದೇಶ ಸಾರ್ಥಕವಾಗಬಹುದು ಎಂಬ ಆನಂದ್ ಸಲಹೆ ನೀಡಿದ್ದಾರೆ. ಕೂಡಲೆ ಮೆಹಬೂಬ್, ತನ್ನ ಹೊಲದಲ್ಲಿ ಬೆಳೆದಿದ್ದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ಸಜ್ಜೆಯನ್ನು ಕೊಪ್ಪಳದ ಗವಿಮಠಕ್ಕೆ ಕೊಂಡೊಯ್ದು ನೀಡಿ ಸಾಮರಸ್ಯ ಮೆರೆಯುವ ಜೊತೆಗೆ ಮಾದರಿಯಾಗಿದ್ದಾರೆ. ಯುವಕನ ಕಾರ್ಯ ಮೆಚ್ಚಿ ಸ್ವಾಮೀಜಿ ಸನ್ಮಾನಿಸಿದ್ದಾರೆ.
ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸಕ್ಕೆ ಹಾಜರಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ