ಕೊಪ್ಪಳ: ಜಿಲ್ಲೆಯಲ್ಲಿ ರುದ್ರಭೂಮಿ ಸಮಸ್ಯೆ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಅದಕ್ಕಾಗಿ ಒಟ್ಟು 150 ಎಕರೆ ಭೂಮಿಯನ್ನು ಈಗಾಗಲೇ ಮಂಜೂರು ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಚಿವರು, ವಿವಿಧ ಪಿಂಚಣಿದಾರರಿಗೆ ಅಂಚೆ ಕಚೇರಿಯಿಂದ ಸರಿಯಾಗಿ ಪಿಂಚಣಿ ದೊರೆಯದ ಹಿನ್ನೆಲೆ, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅರಣ್ಯ ಇಲಾಖೆಯ ಹಾಗೂ ಕಂದಾಯ ಇಲಾಖೆಯ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಸಚಿವರೊಂದಿಗೆ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರಲಾಗಿದೆ. ಕಂದಾಯ ಇಲಾಖೆಯು ನೀಡಬೇಕಾದ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಬೇಕಿದೆ. ಅದರಂತೆ ಅರಣ್ಯ ಇಲಾಖೆಯು ಸಹ ಕಂದಾಯ ಇಲಾಖೆಗೆ 6 ಲಕ್ಷ ಹೆಕ್ಟೇರ್ ಭೂಮಿ ನೀಡಬೇಕಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ವಿವಿಧೆಡೆ ಪ್ರವಾಹದಿಂದಾಗಿ ಕೃಷಿ ಬೆಳೆಗಳು, ಮನೆಗಳು, ಸೇತುವೆ, ಶಾಲಾ-ಕಾಲೇಜು ಕಟ್ಟಡಗಳು ಸೇರಿದಂತೆ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ. ಈವರೆಗೆ ರಾಜ್ಯದಲ್ಲಿ 8071 ಕೋಟಿ ರೂಪಾಯಿ ನಷ್ಟವಾಗಿದ್ದು, ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಇನ್ನು 60 ವರ್ಷ ಮೀರಿದವರು ಪಿಂಚಣಿ ಸಲುವಾಗಿ ಕಚೇರಿಗೆ ಅಲೆಯುವುದು ಸೇರಿದಂತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಅವರ ಆಧಾರ್ ಕಾರ್ಡ್, ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಅದನ್ನು ಗುರುತಿಸಿ ಅರ್ಹರಿಗೆ ಸಂಬಂಧಿಸಿದ ಅಧಿಕಾರಿಗಳು ಪಿಂಚಣಿ ಮಾಡಿಸುವ ನೂತನ ಯೋಜನೆಯನ್ನು ಜಾರಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಆರ್. ಅಶೋಕ್ ಇದೇ ಸಂದರ್ಭದಲ್ಲಿ ಹೇಳಿದರು.
ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಇನ್ನಿತರ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.