ಗಂಗಾವತಿ (ಕೊಪ್ಪಳ) : ಧಾರ್ಮಿಕ ಆಚರಣೆ, ಭಕ್ತಿ ಭಾವದಲ್ಲಿ ನಂಬಿಕೆ ಇಡುವ ಭಕ್ತರು ಎಂತಹ ಕಠೀಣ ವ್ರತಾ ಆಚರಣೆಗಾದರೂ ಸೈ ಎನ್ನುತ್ತಾರೆ. ಮುಖ್ಯವಾಗಿ ಅಯ್ಯಪ್ಪನ ಭಕ್ತರು ಅತ್ಯಂತ ಕಠಿಣ ವ್ರತಾಚಾರಣೆ ಮಾಡಿ ಇರುಮುಡಿ ಹೊತ್ತು ಶಬರಿಮಲೆಗೆ ಹೋಗಿ ಸಂಕ್ರಾಂತಿಯಂದು ಕಾಣುವ ಜ್ಯೋತಿ ದರ್ಶನ ಮಾಡಿ ಪುನಿತರಾಗುತ್ತಾರೆ.
ಇದರ ಭಾಗವಾಗಿ ನಗರದ ಹತ್ತಕ್ಕೂ ಹೆಚ್ಚು ಅಯ್ಯಪ್ಪನ ಭಕ್ತರು, ಕೇವಲ ಕಾಲ್ನಡಿಗೆಯ ಮೂಲಕವೇ 1050 ಕಿ.ಮೀ. ದೂರದಲ್ಲಿರುವ ಕೇರಳ ರಾಜ್ಯದ ಶಬರಿಮಲೆಗೆ ತೆರಳಿದ್ದು, ಅಯ್ಯಪ್ಪನ ದರ್ಶನ ಮಾಡುವ ಸಂಕಲ್ಪ ಹೊಂದಿದ್ದಾರೆ. ಕಿರಣ್ ಕುಮಾರ ಈಡಿಗ ಎಂಬ ಗುರುಸ್ವಾಮಿ ನೇತೃತ್ವದಲ್ಲಿ ನಗರದ ಹನುಮೇಶ ತೆಗ್ಗಿನಮನಿ, ರಾಜಾಸಿಂಗ್, ಮೋಹನ್ ನಾಯಕ್, ಚೇತನ ಕುಮಾರ್, ಚಿಕ್ಕಮಾದಿನಾಳ ಶೇಖರಗೌಡ, ಸಂಗಾಪುರ ವೀರಣ್ಣ, ಭೀಮೇಶ, ಹೇಮಂತ ಹಗರಿಬೊಮ್ಮನಹಳ್ಳಿ, ಗುರು ಪಾದಯಾತ್ರೆ ಮೂಲಕ ತೆರಳಿದ್ದಾರೆ.
ಕಿರಣ್ಕುಮಾರ ಈಡಿಗ ಗುರುಸ್ವಾಮಿಗೆ ಇದು ಆರನೇ ವರ್ಷದ ಕಾಲ್ನಡಿಗೆ ಪಾದಯಾತ್ರೆಯಾಗಿದ್ದು, ಹನುಮೇಶ ತೆಗ್ಗಿನಮನಿ ಎರಡನೇ ವರ್ಷದ ಪಾದಯಾತ್ರೆಯಾಗಿದೆ. ಸ್ವಾಮಿಗಳು ದಿನಕ್ಕೆ 35 ರಿಂದ 40 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. 1050 ಕಿ.ಮೀ. ಅಂತರದ ಯಾತ್ರೆಯನ್ನು 28 ದಿನದಲ್ಲಿ ಮುಗಿಸುವ ಸಂಕಲ್ಪದೊಂದಿಗೆ ತೆರಲಿದ್ದಾರೆ. ಜ.15ರಂದು ಶಬರಿಮಲೆ ಬೆಟ್ಟದಲ್ಲಿ ಕಾಣಿಸಿಕೊಳ್ಳಲಿರುವ ಜ್ಯೋತಿಯ ದರ್ಶನ ಮಾಡಿಕೊಂಡು ಯಾತ್ರಾರ್ಥಿಗಳು ವಾಪಾಸ್ ಬರಲಿದ್ದಾರೆ.
ತಲೆಯ ಮೇಲೆ ಕೇವಲ ಇರುಮುಡಿಯನ್ನು ಹೊತ್ತುಕೊಂಡು ಹೋಗುತ್ತಿರುವ ಯಾತ್ರಾರ್ಥಿಗಳಿಗೆ, ದಾರಿ ಉದ್ದಕ್ಕೂ ಅಲ್ಲಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪೀಠದಲ್ಲಿ, ಭಕ್ತರು ತಮ್ಮ ಮನೆಯಲ್ಲಿ ಊಟ, ಉಪಹಾರ ಮತ್ತು ರಾತ್ರಿ ತಂಗುವ ವ್ಯವಸ್ಥೆ ಮಾಡುತ್ತಿದ್ದಾರೆ. ತಮ್ಮ ಬಳಿ ಕೇವಲ ಅರ್ಧ ಲೀಟರ್ ಕುಡಿಯುವ ನೀರಿನ ಬಾಟಲಿ ಮಾತ್ರ ಇಟ್ಟುಕೊಂಡಿರುವ ಯಾತ್ರಾರ್ಥಿಗಳು, ದಾರಿ ಮಧ್ಯೆ ಸಿಗುವ ಹೊಟೇಲ್ಗಳಲ್ಲಿ ನೀರು ತುಂಬಿಸಿಕೊಳ್ಳುತ್ತಾರೆ.
ಬೆಳಗ್ಗೆ ನಾಲ್ಕು ಗಂಟೆಗೆ ಆರಂಭವಾಗುವ ಕಾಲ್ನಡಿಗೆ ಬೆಳಗ್ಗೆ ಹತ್ತಕ್ಕೆ ಮುಗಿಸಲಾಗುತ್ತಿದೆ. ಉಪಹಾರ ಸೇವಿಸಿ ವಿಶ್ರಾಂತಿ ಪಡೆಯುವ ಭಕ್ತರು ಬಳಿಕ ಮಧ್ಯಾಹ್ನ ಮೂರು ಗಂಟೆಯಿಂದ ಕಾಲ್ನಡಿಗೆ ಆರಂಭಿಸಿ ಆರು ಗಂಟೆಗೆ ಮುಗಿಸಿ ವಿಶ್ರಾಂತಿ ಪಡೆಯುತ್ತಾರೆ. ಹೀಗೆ ದಿನಕ್ಕೆ 35 ರಿಂದ 40 ಕಿ.ಮೀ ಸರಾಗವಾಗಿ ಹೋಗುತ್ತಿದ್ದಾರೆ. ಆರಂಭದಲ್ಲಿ ಕೊಂಚ ಕಷ್ಟವಾಗುತ್ತದೆ. ಬಳಿಕ ಎಲ್ಲವೂ ಸರಿಯಾಗುತ್ತದೆ ಎಂದು ಭಕ್ತ ರಾಜುಸಿಂಗ್ ಹೇಳಿದರು.
ಇದನ್ನೂ ಓದಿ : ಶಬರಿಮಲೆಯಲ್ಲಿ ಭಾರೀ ಜನದಟ್ಟಣೆ: ಅವ್ಯವಸ್ಥೆ ವಿರುದ್ಧ ಸಿಡಿದ ಭಕ್ತರಿಂದ ಪ್ರತಿಭಟನೆ