ಕೋಲಾರ: ಪ್ರತಿಭಟನಾನಿರತ ಮಹಿಳೆಯರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಡಿ.ಎನ್. ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಪ್ರತಿಭಟನೆಯಲ್ಲಿ ತೊಡಗಿದ್ದಾಗ ಪೆಟ್ರೋಲ್ ಮೈ ಮೇಲೆ ಎರಚಿಕೊಂಡು ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡಿ.ಎನ್. ದೊಡ್ಡಿ ಗ್ರಾಮ ಪಂಚಾಯಿತಿಗೆ ಸೇರಿದ ಸಂತೆ ಮೈದಾನದ ಸರ್ಕಾರಿ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು, ಮನೆ ಹಾಗೂ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡಿದ್ದರು.
ಈ ಹಿನ್ನೆಲೆ ಇಂದು ಪಂಚಾಯತಿ ವತಿಯಿಂದ ಜೆಸಿಬಿಗಳ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದರು. ಇನ್ನು, ಒತ್ತುವರಿದಾರರಿಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ತೆರವು ಮಾಡಲು ಮುಂದಾಗಿದ್ದಾರೆಂದು ಆರೋಪಿಸಿ ಅಂಗಡಿ ಮಾಲೀಕರು ಅಧಿಕಾರಿಗಳ ವಿರುದ್ಧ ಪ್ರತಿಭಟನೆಗಿಳಿದರು. ಈ ವೇಳೆ ಪ್ರತಿಭಟನೆಯಲ್ಲಿದ್ದ ಮಹಿಳೆಯರು ಬಾಟಲಿಯಲ್ಲಿನ ಪೆಟ್ರೋಲನ್ನು ಮೈಮೇಲೆ ಎರಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿಯೇ ಇದ್ದ ಪೊಲೀಸರು ಮಹಿಳೆಯರನ್ನು ತಡೆದಿದ್ದಾರೆ.
ಇನ್ನು ಪ್ರತಿಭಟನಾಕಾರರನ್ನು ಮನವೊಲಿಸುವಲ್ಲಿ ಪೊಲೀಸರು ಹರಸಾಹಸಪಟ್ಟಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಲವು ವರ್ಷಗಳಿಂದ ತಮಿಳುನಾಡಿನಿಂದ ವ್ಯಾಪಾರಕ್ಕಾಗಿ ಬಂದ ಕೆಲವರು ಪಂಚಾಯಿತಿಗೆ ಸೇರಿದ ಜಾಗದಲ್ಲಿ ಅಂಗಡಿಗಳನ್ನ ಹಾಕಿಕೊಂಡಿದ್ದು, ಜೊತೆಗೆ ಡಿ.ಎನ್. ದೊಡ್ಡಿಯ ಕೆಲ ಗ್ರಾಮಸ್ಥರು ಸಹ ಮನೆ ಕಟ್ಟಿಕೊಂಡಿದ್ದಾರೆ ಎಂದು ಆರೋಪಗಳು ಕೇಳಿ ಬಂದಿದ್ದವು.
ಇನ್ನು ಒತ್ತುವರಿ ತೆರವು ಮಾಡಬೇಕೆಂದು ಕೆಲ ಗ್ರಾಮಸ್ಥರು ಆಗ್ರಹಿಸಿದ್ದರಿಂದ ಇಂದು ಜೆಸಿಬಿಗಳ ಮೂಲಕ ಒತ್ತುವರಿ ತೆರವಿಗೆ ಗ್ರಾಮ ಪಂಚಾಯಿತಿ ಮುಂದಾಗಿತ್ತು. ಬೇರೆ ರಾಜ್ಯದಿಂದ ಬಂದವರನ್ನು ಹೊರತುಪಡಿಸಿ ಸ್ಥಳೀಯರಿಗೆ ಬೇರೆಡೆ ಜಾಗ ಕೊಡುವುದಾಗಿ ಪಂಚಾಯಿತಿ ಅಧಿಕಾರಿಗಳು ತಿಳಿಸಿ, ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನವನ್ನು ಮಾಡಿದರು. ಸದ್ಯ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಹಸು ಕೋಳಿಗಳ ಸಮೇತ ಭೂಸ್ವಾಧೀನಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದ ರೈತರು: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ ಕಾಮಗಾರಿ ಈಗಾಗಲೇ ಭರದಿಂದ ಸಾಗುತ್ತಿದ್ದು, ರೈತರಿಗೆ ಸಮರ್ಪಕವಾದ ಪರಿಹಾರ ಸಿಗುತ್ತಿಲ್ಲ. ಹೀಗಾಗಿ, ಕೋಲಾರ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಯ ಮುಂದೆ ರೈತರು ನಿನ್ನೆ ಪ್ರತಿಭಟನೆ ನಡೆಸಿದ್ದರು. ಹಸು ಕೋಳಿಗಳ ಸಮೇತ ಭೂಮಿ ಕಳೆದುಕೊಂಡ ರೈತರು ಭೂಸ್ವಾಧೀನಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. 11 ಮಂದಿ ರೈತರ 6.80 ಕೋಟಿ ಪರಿಹಾರಧನ ಅಧಿಕಾರಿಯ ಅಕೌಂಟ್ನಲ್ಲಿದೆ. ಆದ್ರೆ ರೈತರಿಗೆ ಮಾತ್ರ ಬಿಡುಗಡೆ ಮಾಡುತ್ತಿಲ್ಲ. ಉದ್ದೇಶ ಪೂರ್ವಕವಾಗಿ ರೈತರನ್ನ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಚೆನ್ನೈ ಹಾಗೂ ಬೆಂಗಳೂರು ಮಧ್ಯೆ ಕಾಮಗಾರಿಗೆ ಈಗಾಗಲೇ ಭೂಸ್ವಾಧೀನವಾಗಿದ್ದು, ಪರಿಹಾರ ನೀಡದೆ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ರೈತರು ದೂರಿದ್ದರು.
ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಖಂಡಿಸಿ ಕಾರವಾರದಲ್ಲಿ ಬೃಹತ್ ಪ್ರತಿಭಟನೆ