ಕೋಲಾರ: ಜಿಲ್ಲೆಯ ಮಾಲೂರು ಕ್ಷೇತ್ರದ ಶಾಸಕ ಕೈ.ವೈ.ನಂಜೇಗೌಡ ಅವರ ನೇತೃತ್ವದಲ್ಲಿ ಸುಮಾರು 55 ಸಾವಿರ ಕುಟುಂಬಗಳಿಗೆ ಗೋಧಿ ಹಿಟ್ಟು ಹಾಗೂ ತರಕಾರಿ ನೀಡಲಾಯಿತು. ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ರು.
ಈ ವೇಳೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಭಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ವಹಿಸಬೇಕಾಗಿತ್ತು. ಆದ್ರೆ ಬರೀ ಮಾಧ್ಯಮಗಳಲ್ಲಿ ಮಾತ್ರ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಚಾಟಿ ಬೀಸಿದ್ರು. ಅಲ್ಲದೆ ಸರ್ಕಾರ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಪ್ಲಾನ್ ಮಾಡಿಕೊಂಡಿಲ್ಲ ಎಂದ ಅವರು, ವೈದ್ಯರನ್ನ ಬಳಕೆ ಮಾಡಿಕೊಂಡು ಸರಿಯಾದ ರೀತಿಯಲ್ಲಿ ರಕ್ತದ ಮಾದರಿಗಳನ್ನ ಪರೀಕ್ಷಿಸುವಂತಹ ಸೌಲಭ್ಯಗಳನ್ನ ಒದಗಿಸಬೆಕು ಎಂದರು.
ಇನ್ನು ರೈತರನ್ನ ಹೇಗೆ ರಕ್ಷಣೆ ಮಾಡಬೇಕು?, ರೈತರು ಬೆಳೆದ ಬೆಳೆಗಳಿಗೆ ಹೇಗೆ ಮಾರುಕಟ್ಟೆ ವ್ಯವಸ್ಥೆ ಮಾಡಬೇಕೆಂಬ ಯೋಜನೆ ಸರ್ಕಾರದ ಮಟ್ಟದಲ್ಲಿ ಆಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಲ್ಪಸಂಖ್ಯಾತರ ವಿರುದ್ದದ ಹೇಳಿಕೆಗಳಿಗೆ ಸಂಭಂಧಿಸಿದಂತೆ ಮಾತನಾಡಿದ ಅವರು, ರಾಜ್ಯದಲ್ಲಿನ ಕೆಲವು ಶಾಸಕರ ಕೋಮು ಸಂಘರ್ಷ ಹೇಳಿಕೆಗಳಿಂದಾಗಿ ಈ ರೀತಿ ಆಗುತ್ತಿದೆ ಎಂದರು.
ಇದೇ ವೇಳೆ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದ ರೈತ ಅಶ್ವಥ್ ಹಾಗೂ ಬಾಳಿಗಾನಹಳ್ಳಿ ರೈತ ಸುರೇಶ್ ಅವರ ತೋಟಕ್ಕೆ ಭೇಟಿ ನೀಡಿ, ರೈತರು ಬೆಳೆದ ಕ್ಯಾರೇಟ್, ಕೋಸು, ಬಜ್ಜಿ ಮೆಣಸಿನಕಾಯಿ, ಬದನೆಕಾಯಿ ಖರೀದಿಸಿ, ನಿಮಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.