ಕೋಲಾರ\ಗದಗ: ಪೌರತ್ವ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಯು.ಟಿ.ಖಾದರ್ ಬೆಂಕಿ ಹಚ್ಚುವುದರ ಕುರಿತು ಮಾತನಾಡುವ ಮೂಲಕ ವಿಧ್ವಂಸಕ ಕೆಲಸಕ್ಕೆ ಪ್ರಚೋದನೆ ನೀಡಿದ್ದಾರೆಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದ್ದಾರೆ.
ಪೌರತ್ವ ತಿದ್ದುಪಡಿಯಿಂದಾಗಿ ದೇಶದ ಯಾವುದೇ ಧರ್ಮದವರಿಗೂ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ನವರು ವೋಟ್‍ಗಾಗಿ ಯುವಕರನ್ನ ದುರ್ಬಳಕೆ ಮಾಡಿಕೊಳ್ಳುವುದರ ಮೂಲಕ ಮುಖಕ್ಕೆ ಮಾಸ್ಕ್ ಧರಿಸಿ ಕೃತ್ಯ ಎಸಗುವಂತೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿದರು. ಪೌರತ್ವ ತಿದ್ದುಪಡಿಯಿಂದಾದರು ನಾವು ಈ ದೇಶದ ಪ್ರಜೆ ಎಂದು ಕಾಂಗ್ರೆಸ್ನವರಿಗೆ ಅರಿವಾಗಿದೆ. ಹಿಂದೆ ಪ್ರತಿಭಟನೆಗಳು ನಡೆದರೆ ಪಾಕಿಸ್ತಾನದ ಬಾವುಟಗಳು ಹಾರಾಡುತ್ತಿದ್ದವು. ಇದೀಗ ದೇಶದ ಬಾವುಟಗಳನ್ನ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದರು.
ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಮಾತನಾಡಿ, ಮಂಗಳೂರಿನಲ್ಲಿ ಕಿಡಿಗೇಡಿಗಳು ಮಾಡಿರುವ ವಿಧ್ವಂಸಕ ಕೃತ್ಯ ಕುರಿತು ಎರಡು ಹಂತಗಳಲ್ಲಿ ತನಿಖೆ ಪ್ರಾರಂಭಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪೌರತ್ವ ಕಾಯ್ದೆ ವಿರೋಧಿಸಿ ಗದಗದಲ್ಲಿಯೂ ಸಹ ಅಂಜುಮನ್-ಎ-ಇಸ್ಲಾಂ ಕಮಿಟಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಮುಳಗುಂದ ಬಳಿ ಇರೋ ಶಾಹಿ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಶಾಂತಿಯುತ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಸ್ಲಿಂ ಹಾಗೂ ದಲಿತ ಮುಖಂಡರು ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ರಾಷ್ಟ್ರಗೀತೆ ಹಾಡುವ ಮೂಲಕ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು.