ಬೆಂಗಳೂರು/ಪ್ರಯಾಗ್ರಾಜ್ : ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಉತ್ತರಪ್ರದೇಶದ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಭಾನುವಾರ ಕುಟುಂಬ ಸಮೇತ ಪುಣ್ಯ ಸ್ನಾನ ಮಾಡಿದರು.
ಡಿಸಿಎಂ ಡಿ. ಕೆ ಶಿವಕುಮಾರ್ ಅವರು ತಾವು ಅಜ್ಯಯ್ಯ ಎಂದೇ ಕರೆಯಲ್ಪಡುವ ನೆಚ್ಚಿನ ಗುರುಗಳಾದ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿ ಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ಪತ್ನಿ ಉಷಾ ಅವರೊಂದಿಗೆ ಪುಣ್ಯ ಸ್ನಾನ ಮಾಡಿದರು. ನಂತರ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪತ್ನಿ ಉಷಾ ಅವರ ಜೊತೆಗೂಡಿ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.
![dcm-d-k-shivakumar-take-holy-dip-at-triveni-sangam](https://etvbharatimages.akamaized.net/etvbharat/prod-images/09-02-2025/dcmdkshimahakumbhavisit_09022025212716_0902f_1739116636_316.jpg)
ಡಿಸಿಎಂ ಡಿ. ಕೆ ಶಿವಕುಮಾರ್ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕುಟುಂಬ ಸಮೇತ ಪಾಲ್ಗೊಂಡು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ತಂದಿದೆ ಎಂದು ಅವರು ತಮ್ಮ ಅನುಭವವನ್ನು ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
![dcm-d-k-shivakumar-take-holy-dip-at-triveni-sangam](https://etvbharatimages.akamaized.net/etvbharat/prod-images/09-02-2025/dcmdkshimahakumbhavisit_09022025212716_0902f_1739116636_354.jpg)
ಪುಣ್ಯ ಸ್ನಾನ ಮಾಡಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ''ಮಹಾ ಕುಂಭಮೇಳವನ್ನು ಅಚ್ಚುಕಟ್ಟಾಗಿ ಪವಿತ್ರ ರೀತಿಯಲ್ಲಿ ನಡೆಸಿದ್ದಕ್ಕಾಗಿ ಎಲ್ಲಾ ಸಂಘಟಕರಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ. ಮಹಾ ಕುಂಭ ಮೇಳವು ಒಬ್ಬರ ಜೀವನದಲ್ಲಿ ಬಂದು ಹೋಗುವ ಒಂದು ಐತಿಹಾಸಿಕ ಕ್ಷಣವಾಗಿದೆ. ಇಲ್ಲಿ ನೆರೆದಿರುವ ಲಕ್ಷಾಂತರ ಜನರು ವ್ಯವಸ್ಥೆಗಳನ್ನು ವೀಕ್ಷಿಸುತ್ತಿದ್ದಾರೆ. ಅಂತಹ ಕಾರ್ಯಕ್ರಮವನ್ನು ಆಯೋಜಿಸುವುದು ಸಣ್ಣ ಕೆಲಸವಲ್ಲ ಎಂದು ನನಗೆ ಅರ್ಥವಾಗಿದೆ. ಇದನ್ನು ಸಾಧ್ಯವಾಗಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ ಎನ್ನುವುದರ ಬಗ್ಗೆ ತಮಗೆ ಅರಿವಿದೆ " ಎಂದು ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಯಾಗ್ ರಾಜ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುಣ್ಯಸ್ನಾನ ಮಾಡಿದ ಬಗ್ಗೆ ಟೀಕೆ ಮಾಡಿದ ಬೆಳವಣಿಗೆಯ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಪ್ರಯಾಗರಾಜ್‌ನಲ್ಲಿ ಕುಂಭಮೇಳದ ವೇಳೆ ಪುಣ್ಯ ಸ್ನಾನ ಮಾಡಿರುವುದು ಈಗ ಗಮನಸೆಳೆದಿದೆ.
ಇದನ್ನೂ ಓದಿ : ಟಿ ನರಸೀಪುರದಲ್ಲಿ 13ನೇ ಕುಂಭಮೇಳ, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ - KUMBHA MELA