ಕೋಲಾರ: ಜಾತಿ ಲೆಕ್ಕಾಚಾರದಲ್ಲಿ ಡಿಕೆಶಿ ಪ್ರಕರಣವನ್ನು ಬಿಂಬಿಸಿಕೊಳ್ಳುವುದು ಬೇಡ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ. ಡಿಕೆಶಿ ಪರವಾಗಿ ಒಕ್ಕಲಿಗ ಸಮುದಾಯ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಸಂಸದ ಮುನಿಸ್ವಾಮಿ ಪ್ರತಿಕ್ರಿಯೆ ನೀಡಿದರು.
ಕೋಲಾರ ಹೊರವಲಯದ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಾನುವಾರುಗಳಿಗೆ ಕಾಲು ಬಾಯಿ ರೋಗ ನಿಯಂತ್ರಣಾ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಪ್ರಥಮ ಪ್ರಜೆಯಿಂದ ಹಿಡಿದು ಕಟ್ಟಕಡೆಯ ವ್ಯಕ್ತಿಗೂ ಕಾನೂನು ಒಂದೇ. ಹೀಗಾಗಿ ಜಾತಿ ಲೆಕ್ಕಾಚಾರದಲ್ಲಿ ಬಣ್ಣ ಕಟ್ಟುವುದು ಬೇಡ ಎಂದರು. ಅಲ್ಲದೆ ಇಡಿ ಸ್ವತಂತ್ರ ಸಂಸ್ಥೆಯಾಗಿದ್ದು, ಹಿಂದೆಯೂ ಎಲ್ಲಾ ಪಕ್ಷದ ಕೆಲ ಮಂತ್ರಿಗಳೆಲ್ಲಾ ಇಡಿ ಮುಂದೆ ಪ್ರಕರಣಗಳನ್ನು ಎದುರಿಸಿದ್ದರೂ ಪ್ರತಿಭಟನೆ ಮಾಡದೆ ಸುಮ್ಮನಿದ್ದರು. ಹಾಗೆಯೇ ಡಿಕೆಶಿ ಬಂಬಲಿಗರು ಸುಮ್ಮನಿರಬೇಕು ಎಂದರು.
ಅಲ್ಲದೆ ಕಾನೂನಿನ ಮುಂದೆ ಯಾರೇ ತಪ್ಪು ಮಾಡಿದ್ದರೂ ತಪ್ಪೇ. ಆದ್ರೆ ಅದನ್ನು ಜಾತಿ ಲೆಕ್ಕಾಚಾರದಲ್ಲಿ ಬಿಂಬಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಅಲ್ಲದೆ ಡಿಕೆಶಿ ಅವರು ನಿರಪರಾಧಿಯಾಗಿದ್ದರೆ ಪ್ರಕಣವನ್ನು ಎದುರಿಸಿ ಹೊರಬರುತ್ತಾರೆ. ಒಂದು ವೇಳೆ ನಿಜವಾಗಲೂ ತಪ್ಪು ಮಾಡಿದ್ದರೆ ಕಾನೂನು ತನ್ನ ಕೆಲಸ ಮಾಡುತ್ತೆ ಎಂದು ಹೇಳಿದರು.
ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರಿಗೆ ಅವರ ಹೈಕಮಾಂಡ್ ಬಳಿ ಮಾತನಾಡಲು ಭಯ ಇರಬಹದು. ಆದ್ರೆ ನಮ್ಮ ನಾಯಕರುಗಳಿಗೆ ಅಂತಹ ಯಾವುದೇ ಭಯವಿಲ್ಲ. ಶೀಘ್ರದಲ್ಲೇ ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತದೆ ಎಂದರು.