ಕೋಲಾರ : ಕೆಜಿಎಫ್ ಅಧೀಕ್ಷಕರ ಹುದ್ದೆ ಹಾಗೂ ಕೆಜಿಎಫ್ ಕಚೇರಿ ಸ್ಥಳಾಂತರ ವದಂತಿ ಹಿನ್ನೆಲೆ ಇಂದು ವಿವಿಧ ಸಂಘಟನೆಗಳಿಂದ ಕೆಜಿಎಫ್ ಬಂದ್ಗೆ ಕರೆ ನೀಡಲಾಗಿದೆ. ಅದರಂತೆ ಕೆಜಿಎಫ್ ನಗರದಾದ್ಯಂತ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ರಾಜೇಂದ್ರನ್ ಸೇರಿದಂತೆ, ವಿವಿಧ ಸಂಘಟನೆಗಳ ಮುಖಂಡರು ಬಂದ್ಗೆ ಕರೆ ನೀಡಿದ್ದರೂ, ಇದುವರೆಗೂ ಯಾವುದೇ ಸಂಘಟನೆಯವರು ರಸ್ತೆಗಿಳಿದಿಲ್ಲ. ಇನ್ನು ಖಾಸಗೀ ಬಸ್ ಸಂಘಟನೆಯವರು ಸಹ ಬಂದ್ಗೆ ಬೆಂಬಲ ನೀಡಿದ್ದು, ಎಂದಿನಂತೆ ಸಾರಿಗೆ ಬಸ್ ಸಂಚಾರ ಯಥಾಸ್ಥಿತಿಯಲ್ಲಿದೆ. ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಕೆಜಿಎಫ್‍ನಲ್ಲಿ ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ 150 ವರ್ಷಗಳ ಹಿಂದೆ ಆರಂಭಿಸಿರುವ ಪೊಲೀಸ್ ಅಧೀಕ್ಷಕರ ಹುದ್ದೆ ಹಾಗೂ ಕಚೇರಿಯನ್ನು ಯಾವುದೇ ಕಾರಣಕ್ಕೂ ರದ್ದು, ಅಥವಾ ಸ್ಥಳಾಂತರ ಮಾಡಬಾರದೆಂಬುದು ಸ್ಥಳೀಯರ ಒತ್ತಾಯವಾಗಿದೆ.
ಕೆಜಿಎಫ್‍ನಲ್ಲಿ ಹಿಂದೆ ಬ್ರಿಟಿಷರು ಚಿನ್ನದ ಗಣಿ ಕಾರ್ಯಾರಂಭ ಮಾಡಿದ ಸಮಯದಲ್ಲಿ ಪೊಲೀಸ್ ಅಧೀಕ್ಷಕರ ಹುದ್ದೆ ಮತ್ತು ಕಚೇರಿ ಪ್ರಾರಂಭಿಸಿದ್ದರು. ನಂತರ ಇಲ್ಲಿ ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು ಕಾರ್ಮಿಕರು ಗಣಿ ಕೆಲಸ ನಿರ್ವಹಿಸಲು ಅಪಾರ ಸಂಖ್ಯೆಯಲ್ಲಿ ಬಂದು ನೆಲೆಸಿದ್ದರಿಂದ ಆಗ, ಪೊಲೀಸ್ ಅಧೀಕ್ಷಕರ ಹುದ್ದೆ ಸೃಷ್ಟಿಯಾಗಿತ್ತು. ನಂತರದ ದಿನಗಳಲ್ಲಿ ಗಣಿ ಮುಚ್ಚಿದರೂ ಕಾರ್ಮಿಕರು ಇಲ್ಲೇ ಗುಡಿಸಲು ನಿರ್ಮಿಸಿಕೊಂಡು ನೆಲೆಸಿದ್ದಾರೆ.
ಕೆಜಿಎಫ್ ಪೊಲೀಸ್ ಅಧೀಕ್ಷಕರ ಕಾರ್ಯವ್ಯಾಪ್ತಿಗೆ ಕೆಜಿಎಫ್ ಹಾಗೂ ಬಂಗಾರಪೇಟೆ ತಾಲೂಕುಗಳು ಒಳಪಟ್ಟಿವೆ. ಚಿನ್ನದ ಗಣಿ ಒಡೆತನದಲ್ಲಿ 7 ಸಾವಿರ ಎಕರೆ ಜಾಗವಿದೆ, ಜೊತೆಗೆ ಇಲ್ಲಿ ಬಿಇಎಂಎಲ್ ಕೈಗಾರಿಕೆಯೂ ಇದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಮುಂದೆ 900 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಪ್ರಾರಂಭಿಸುವ ಪ್ರಸ್ತಾವನೆಯೂ ಇದೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಹರಿದ ನೆತ್ತರು.. ಕ್ಷುಲ್ಲಕ ಕಾರಣಕ್ಕೆ ತಮ್ಮನನ್ನೇ ಕೊಂದ ಅಣ್ಣ!
ಈಗಾಗಲೇ ಹಲವು ಪ್ರತಿಷ್ಠಿತ ಕಂಪನಿಗಳು ಸ್ಥಳ ಪರಿಶೀಲನೆ ಹಾಗೂ ಸುರಕ್ಷತಾ ವ್ಯವಸ್ಥೆಯ ಅವಲೋಕನ ನಡೆಸಿರುವ ಹಿನ್ನೆಲೆ, ಇಲ್ಲಿಂದ ಪೊಲೀಸ್ ಅಧೀಕ್ಷಕರ ಕಚೇರಿ ಸ್ಥಳಾಂತರವಾದಲ್ಲಿ ಕೈಗಾರಿಕ ವಲಯ ಸ್ಥಾಪನೆಗೆ ಹಿನ್ನಡೆಯಾಗುವ ಸಾಧ್ಯತೆಯೂ ಇದ್ದು, ಇದರಿಂದ ಸ್ಥಳೀಯ ನಿರುದ್ಯೋಗಿಗಳಿಗೆ ತೊಂದರೆಯಾಗುತ್ತದೆ ಎನ್ನಲಾಗ್ತಿದೆ. ಇನ್ನು ಮುನ್ನಚ್ಚರಿಕಾ ಕ್ರಮವಾಗಿ ಕೆಜಿಎಫ್ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.