ಕೋಲಾರ: ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಮಹಿಳೆಯೊಬ್ಬರನ್ನು ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ವೈರಲ್ ಆಗಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕಲ್ಲಿಕುಂಟೆ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಕಲ್ಲಿಕುಂಟೆ ಗ್ರಾಮದ ಶಂಕರಪ್ಪ ಹಾಗೂ ರತ್ನಮ್ಮ ಎಂಬ ಕುಟುಂಬಗಳ ನಡುವೆ ಜಗಳ ನಡೆದಿದ್ದು, ರತ್ನಮ್ಮ ಎಂಬ ಮಹಿಳೆ ಹಲ್ಲೆಗೊಳಗಾಗಿದ್ದಾಳೆ. ರತ್ನಮ್ಮಗೆ ಸೇರಿದ ಜಮೀನಿಗೆ ವಿದ್ಯುತ್ ಕಂಬ ಅಳವಡಿಸಬೇಕಿದ್ದು, ಕಂಬಕ್ಕೆ ಎಳೆಯುವ ವಿದ್ಯುತ್ ಲೈನ್ ಶಂಕರಪ್ಪ ಎಂಬುವರ ಜಮೀನಿನಿಂದ ಹಾದು ಹೋಗಬೇಕಿತ್ತು. ಆದ್ರೆ ಶಂಕರಪ್ಪ ತಮ್ಮ ಜಮೀನಿನ ಮೇಲೆ ವಿದ್ಯುತ್ ಲೈನ್ ಎಳೆಯುವುದಕ್ಕೆ ನಿರಾಕರಿಸಿದ್ದ. ಈ ಹಿನ್ನಲೆ ರತ್ನಮ್ಮ ಹಾಗೂ ಶಂಕರಪ್ಪ ಎಂಬುವರ ನಡುವೆ ಗಲಾಟೆ ನಡೆದಿದೆ. ಈ ಸಂಬಂಧ ರತ್ನಮ್ಮಳನ್ನು ಶಂಕರಪ್ಪ ಹಾಗೂ ಶೇಖರ್ ಬಾಬು ಎಂಬುವರು ರಸ್ತೆಯಲ್ಲಿಯೇ ಹಿಗ್ಗಾಮುಗ್ಗ ಥಳಿಸಿ, ಕಾಲಿನಲ್ಲಿ ಒದ್ದು ಮಹಿಳೆ ಮೇಲೆ ದೌರ್ಜನ್ಯವೆಸಗಿದ್ದಾರೆ.
ಇನ್ನು ಒಂದೇ ಕುಟುಂಬದವರ ನಡುವೆ ನಡೆದಿರುವ ಬೀದಿ ಜಗಳ ಇದಾಗಿದ್ದು, ಹಲ್ಲೆಗೊಳಗಾದ ಮಹಿಳೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.