ಕೋಲಾರ: ಚಿನ್ನದ ನೆಲವನ್ನು ಕಾಯುವ ಜೊತೆಗೆ ರೌಡಿಗಳ ಸಾಮ್ರಾಜ್ಯ ಮಟ್ಟಹಾಕಿ ಹೆಸರು ಮಾಡಿದ್ದ ಕೆಜಿಎಫ್ ಪೊಲೀಸ್ ಜಿಲ್ಲೆಯನ್ನು ವಿಜಯನಗರಕ್ಕೆ ಸ್ಥಳಾಂತರಗೊಳ್ಳಲು ಸಿದ್ಧವಾಗಿದೆ. ಇದಕ್ಕೆ ಕೆಜಿಎಫ್ ಭಾಗದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ಪೊಲೀಸ್ ಜಿಲ್ಲೆಯ ಇತಿಹಾಸ:
ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಜಾನ್ ಟೈಲರ್ ಅಂಡ್ ಸನ್ಸ್ ಕಂಪನಿ 130 ವರ್ಷಗಳ ಹಿಂದೆ ಕೆಜಿಎಫ್ನಲ್ಲಿ ಗಣಿಗಾರಿಕೆ ಆರಂಭ ಮಾಡಿದಾಗ ಅಂದಿನ ಬ್ರಿಟಿಷಿಗರರು ತಮ್ಮ ಸುರಕ್ಷತೆಗಾಗಿ ಹೆಚ್ಚಿನ ಆದ್ಯತೆ ನೀಡಿ ಪೊಲೀಸ್ ವ್ಯವಸ್ಥೆಯನ್ನು ರಾಜ್ಯದಲ್ಲೇ ಮೊದಲು ಇಲ್ಲಿ ಜಾರಿಗೆ ತಂದಿದ್ದರು. ಇಡೀ ರಾಜ್ಯದಲ್ಲಿಯೇ ಕೆಜಿಎಫ್ ಪೊಲೀಸ್ ವ್ಯವಸ್ಥೆ ಪಾರಂಪರಿಕ ಹಿನ್ನೆಲೆ ಹೊಂದಿದೆ. ಇಂತಹ ಕಚೇರಿ ಇಂದು ಸ್ಥಳಾಂತರಗೊಳ್ಳಲು ಸಿದ್ಧಗೊಂಡಿದೆ.
ಚಿನ್ನದ ಗಣಿಗಾರಿಕೆ ನಡಸುತ್ತಿದ್ದಾಗ ಸುಮಾರು 35 ಸಾವಿರ ಕಾರ್ಮಿಕರು ಗಣಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಚಿನ್ನದ ಗಣಿಗಳಲ್ಲಿ ಕಳ್ಳತನ ತಡೆಯುವುದು ಮತ್ತು ತಮ್ಮ ಭದ್ರತೆಗಾಗಿ ಬ್ರಿಟಿಷರು ವಿಶೇಷ ಪೊಲೀಸ್ ವ್ಯವಸ್ಥೆ ಅಸ್ತಿತ್ವಕ್ಕೆ ತಂದಿದ್ದರು. ಕೆಜಿಎಫ್ನಲ್ಲಿ ಮೈನಿಂಗ್ ಮತ್ತು ನಾನ್ ಮೈನಿಂಗ್ ಏರಿಯಾ ಎಂಬ ಎರಡು ಪ್ರತ್ಯೇಕ ಪ್ರದೇಶಗಳನ್ನು ಬ್ರಿಟಿಷರು ಮಾಡಿಕೊಂಡಿದ್ದರು.
ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶ ಮತ್ತು ಚಿನ್ನದ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ವಾಸಿಸುವ ಬಂಗಲೆಗಳು ಹಾಗೂ ಕೆಜಿಎಫ್ ಕ್ಲಬ್ ಸೇರಿ ನಂದಿ ದುರ್ಗ, ಮೈಸೂರು ಹಾಲ್ ಮನರಂಜನಾ ಕ್ಲಬ್ ಪ್ರದೇಶಗಳಿಗೆ ಇತರ ನಾಗರಿಕರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು.
ಅಂದಿಗೆ ಚಿನ್ನದ ಗಣಿಯ ಅಧಿಕಾರಿಯೊಬ್ಬರಿಗೆ ಪೊಲೀಸ್ ಅಧಿಕಾರವನ್ನು ನೀಡಲಾಗಿತ್ತು. ಅದರಂತೆ ಸ್ವಾತಂತ್ರ್ಯ ಬಂದ ಮೇಲೂ ಕೆಜಿಎಫ್ ಎಸ್ಪಿ ಕಚೇರಿ ಮುಂದುವರೆಯಿತು. ಎಸ್ಪಿ ಕಚೇರಿ ಅಲ್ಲದೇ ಕೆಜಿಎಫ್ನಲ್ಲಿ ಪ್ರತ್ಯೇಕ ಡಿಎಆರ್ ಸಿಬ್ಬಂದಿಯನ್ನು ಅಂದಿಗೆ ನೇಮಕ ಮಾಡಲಾಯಿತು. ಅವರಿಗಾಗಿ ಚಾಂಪಿಯನ್ ರೀಫ್‌ನಲ್ಲಿ ಪ್ರತ್ಯೇಕವಾದ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ.
ವಿಜಯನಗರಕ್ಕೆ ಸ್ಥಳಾಂತರಿಸಲು ಸಿದ್ಧತೆ:
ರಾಜ್ಯದಲ್ಲೇ ಕೆಜಿಎಫ್ ಅನ್ನು ಪ್ರತ್ಯೇಕ ಪೊಲೀಸ್ ಜಿಲ್ಲೆ ಎಂದು ಕೆರೆಯಲಾಗುತ್ತದೆ. ಅದಕ್ಕೆ ಪ್ರತ್ಯೇಕ ಎಸ್ಪಿ ಇರುತ್ತಾರೆ. ಇಂತಹ ಪ್ರತ್ಯೇಕ ವ್ಯವಸ್ಥೆ ಇಲ್ಲಿ ಇದೆ. ಎಸ್ಪಿ ಬಂಗಲೆಯಿಂದ ಹಿಡಿದು ಪೊಲೀಸ್ ಸಿಬ್ಬಂದಿ ವಸತಿ ಗೃಹ ಎಲ್ಲವೂ ಇದೆ. ಆದರೆ, ಈಗ ಇದೇ ಪೊಲೀಸ್ ಜಿಲ್ಲೆಯನ್ನು ನೂತನ ಜಿಲ್ಲೆ ವಿಜಯನಗರಕ್ಕೆ ಸ್ಥಳಾಂತರಿಸಲು ಡಿಎಆರ್ ಕಚೇರಿ ಸಿದ್ಧತೆ ನಡೆಸುತ್ತಿದೆ.
ಸ್ಥಳಾಂತರಕ್ಕೆ ಹಿಂದೆ ನಡೆದಿತ್ತು ತಯಾರಿ:
ಒಂದು ತಾಲೂಕಿಗೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆ ಇರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಕೋಲಾರ ಎಸ್ಪಿ ಕಚೇರಿಯೊಂದಿಗೆ ವಿಲೀನ ಮಾಡಲು ಮುಂದಾಗಿತ್ತು. ಆದರೆ, ರಾಜಕೀಯ ಒತ್ತಡದಿಂದಾಗಿ ಸರ್ಕಾರದ ಆಜ್ಞೆ ಅನುಷ್ಠಾನವಾಗಲಿಲ್ಲ. ಈಗ ರಾಜ್ಯದಲ್ಲಿ 31 ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಉದಯವಾಗಿದೆ.
ಅಲ್ಲಿ ನೂತನವಾಗಿ ಎಸ್ಪಿ ಕಚೇರಿ ಆರಂಭಿಸಲಾಗಿದೆ. ಹೊಸದಾಗಿ ಹುದ್ದೆಗಳನ್ನು ಸೃಷ್ಟಿ ಮಾಡುವ ಬದಲು ಕೆಜಿಎಫ್ ಎಸ್ಪಿ ಕಚೇರಿ ಸಿಬ್ಬಂದಿ ಸ್ಥಳಾಂತರ ಮಾಡಲು ಆರ್ಥಿಕ ಇಲಾಖೆ ಕಳೆದ ಆ.19 ರಂದು ಆದೇಶ ಹೊರಡಿಸಿದೆ.
ಕೆಜಿಎಫ್ ಪೊಲೀಸ್ ಇಲಾಖೆಯ ಎರಡು ತಾಲೂಕಿಗೆ ಮಾತ್ರ ಸೀಮಿತವಾಗಿದ್ದು, 12 ಪೊಲೀಸ್ ಠಾಣೆ, 14 ಜನ ಸಿಪಿಐ ಸೇರಿ 900 ಮಂದಿ ಸಿಬ್ಬಂದಿ ಇಲ್ಲಿದ್ದಾರೆ. ಎಸ್ಪಿ ಕಚೇರಿಯ 240 ಮಂದಿ ಆಡಳಿತಾತ್ಮಕ ಸಿಬ್ಬಂದಿ ಮತ್ತು 248 ಡಿಎಆರ್ ಸಿಬ್ಬಂದಿ ಸ್ಥಳಾಂತರ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
ಎಸ್ಪಿ ಕಚೇರಿ ರದ್ದಾದ ನಂತರ ಡಿವೈಸ್ಪಿ ಉಪ ವಿಭಾಗ ಕೆಜಿಎಫ್ನಲ್ಲಿ ಮುಂದುವರೆಯಲಿದ್ದು, ಹಾಲಿ ಐಪಿಎಸ್ ದರ್ಜೆಯ ಇಲಕ್ಕಿಯಾ ಕರುಣಾಗರನ್ ಕೆಜಿಎಫ್ ಎಸ್ಪಿ ಕಚೇರಿಯ ಕೊನೆಯ ಎಸ್ಪಿಯಾಗಲಿದ್ದಾರೆ. ಈ ಬಗ್ಗೆ ಪೊಲೀಸ್ ಸಿಬ್ಬಂದಿಯಲ್ಲೂ ಆತಂಕ ಮನೆ ಮಾಡಿದೆ.
ಕೆಜಿಎಫ್ನಲ್ಲೂ ಕೈಗಾರಿಕಾ ವಲಯ ಸೇರಿದಂತೆ ಗಡಿ ಭಾಗದ ರಕ್ಷಣೆ ದೃಷ್ಟಿಯಿಂದ ಎಸ್ಪಿ ಕಚೇರಿಯ ಸ್ಥಳಾಂತರ ವಿಚಾರ ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ಸ್ಥಳೀಯರು ನೀಡುತ್ತಿದ್ದಾರೆ.
ಇದನ್ನೂ ಓದಿ: 20 ತಿಂಗಳ ಬಳಿಕ 1-5ನೇ ತರಗತಿಗೆ ಗ್ರೀನ್ ಸಿಗ್ನಲ್: ಅರ್ಧ ದಿನವಷ್ಟೇ ಶಾಲೆ, ಬಿಸಿಯೂಟ ಇಲ್ಲ