ಕೋಲಾರ: ಅದು ಬೆಂಗಳೂರಿನಿಂದ-ಚೆನ್ನೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ, ಆದರೆ ರಸ್ತೆ ನೆಪದಲ್ಲಿ ಊರುಗಳಿಗೆ ಪ್ರಕೃತಿಯ ನಡುವೆ ಇದ್ದ ಹಳೆಯ ಸಂಪರ್ಕ ಸಂಬಂಧವನ್ನೆ ಕಡಿದು ಹಾಕಿದ್ದಲ್ಲದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುವ ಮೂಲಕ ಸಾವಿನ ದಾರಿಯಾಗಿ ಪರಿಣಮಿಸಿದೆ.
ಕೋಲಾರ ನಗರದ ಮೂಲಕ ಹಾದು ಹೋಗುವ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ, ಸುಮಾರು 560 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಹೆದ್ದಾರಿ ಬೆಂಗಳೂರಿನಿಂದ-ಚೆನೈಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿ ಅಭಿವೃದ್ದಿಪಡಿಸಿ ರಾಷ್ಟ್ರೀಯ ಹೆದ್ದಾರಿ-4ನ್ನು ರಾಷ್ಟ್ರೀಯ ಹೆದ್ದಾರಿ-75 ಮಾಡಲಾಯಿತು.
ಇನ್ನು ಹೆದ್ದಾರಿಯಲ್ಲಿ ಅಂಡರ್‌ಪಾಸ್‌ಗಳು, ಮೇಲ್ಸೇತುವೆಗಳು, ಹಾಗೂ ಸರಿಯಾದ ಸೂಚನಾ ಫಲಕ, ಶೌಚಾಲಯ ವ್ಯವಸ್ಥೆ, ಲೈಟ್ ವ್ಯವಸ್ಥೆ ಮಾಡದ ಹಿನ್ನೆಲೆ ಹೆದ್ದಾರಿ ಸಾವಿನ ಮಾರ್ಗವಾಗಿ ಪರಿಣಮಿಸಿದೆ. ಅಪಘಾತ ವಲಯಗಳನ್ನ ಸೂಚಿಸಿ, ಅಲ್ಲಿ ಅಂಡರ್‌ಪಾಸ್ ನಿರ್ಮಾಣ, ಮೇಲ್ಸೇತುವೆ ಹಾಗೂ ಸೂಚನಾ ಫಲಕಗಳು, ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಅನೇಕ ಸಭೆಗಳನ್ನ ಮಾಡಿ ಜಿಲ್ಲಾಡಳಿತ ಸೂಚನೆ ನೀಡಿದೆಯಾದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ.
ಒಟ್ಟಿನಲ್ಲಿ ಸಾವಿನ ದಾರಿಯಾಗಿ ಪರಿಣಮಿಸಿದ್ದ ಹೆದ್ದಾರಿಯಲ್ಲಿ ಅವ್ಯವಸ್ಥೆಗಳನ್ನ ಸರಿಪಡಿಸುವಂತೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರಕೃತಿ ಸಂಪರ್ಕವನ್ನು ಹಾಳುಮಾಡದೇ, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಗಳನ್ನ ಬಗೆಹರಿಸುತ್ತಾರಾ ಕಾದುನೋಡಬೇಕಿದೆ.