ಕೋಲಾರ: ನಗರದ ಖಾಸಗಿ ಶಾಲೆಯ ಮುಖ್ಯಸ್ಥರೊಬ್ಬರು ಶಾಲೆಗೆ ಬೆಳಕು ಬರುತ್ತಿಲ್ಲ ಎಂದು ನೆಪವೊಡ್ಡಿ ಮಾಜಿ ಶಾಸಕರ ತೋಟದ 50 ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೇರಿ ಕ್ರಾಸ್ ಬಳಿ ನಡೆದಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಮಾಜಿ ಶಾಸಕರಿಗೆ ಸಂಬಂಧಿಸಿದ ಮಾಡಿಕೇರಿ ಕ್ರಾಸ್ ಬಳಿಯ ಸರ್ವೆ ನಂ 428/02 ರ ಜಮೀನಿನಲ್ಲಿ ಬೆಳೆದು ನಿಂತಿದ್ದ 1 ತೆಂಗಿನ ಮರ, 2 ಬೇವಿನ ಮರಗಳು, 1 ಮಾವಿನ ಮರ, 7 ಸಿಲ್ವರ್ ಮರಗಳು, 12 ಟೀಕ್ ಮರಗಳು ಸೇರಿದಂತೆ ಸಣ್ಣ ಮರಗಳನ್ನು ಕಡಿದು ಶಾಲೆಗೆ ಸಂಬಂಧಿಸಿದ ಜಮೀನಿನಲ್ಲಿ ಹಾಕಿಕೊಂಡಿದ್ದಾರೆ.
ಇನ್ನೂ ಮಾಜಿ ಶಾಸಕರು ಜಮೀನು ಕಾಯಲೆಂದು ನಾಗೇಶ್ ಎಂಬುವರರನ್ನು ಕಾವಲಿಗೆ ನೇಮಿಸಿದ್ದರೂ ಇಂದು ಮಧ್ಯಾಹ್ನದ ವೇಳೆ ಜ್ಯೋತಿ ಶಾಲೆಯ ಮುಖ್ಯಸ್ಥ ಐದು ಜನರೊಂದಿಗೆ ಅಕ್ರಮವಾಗಿ ಪ್ರವೇಶಿಸಿ ಮರಗಳನ್ನು ನೆಲಕ್ಕುರುಳಿಸಿದ್ದಾರೆ. ಇನ್ನೂ ಇದನ್ನು ಕಾವುಲುಗಾರ ನಾಗೇಶ್ ಪ್ರಶ್ನಿಸಿದಾಗ ನಮ್ಮ ಶಾಲೆಗೆ ಮರಗಳು ಅಡ್ಡವಾಗಿದ್ದು ಗಾಳಿ ಬೆಳಕು ಸರಿಯಾಗಿ ಬರುತ್ತಿರಲಿಲ್ಲ ಇದರಿಂದ ಮರಗಳನ್ನು ಕಡಿಯುತ್ತಿದ್ದೇವೆ. ನೀನು ಶಾಸಕರಿಗೆ ಏನು ಬೇಕಾದರೂ ಹೇಳಿಕೋ ಎಂದು ಅವಾಚ್ಛ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ಮರ ಕಡಿಯುವುದಕ್ಕೆ ಅಡ್ಡಿಪಡಿಸಿದರೆ ಪ್ರಾಣ ತಗೆಯುವುದಾಗಿ ಬೆದರಿಕೆ ಹಾಕಿ ಮರಗಳನ್ನು ಮಿಶಿನ್‌ನಿಂದ ಕಡಿದು ಹಾಕಿದ್ದಾರೆ ಎನ್ನಲಾಗಿದೆ.
ಇನ್ನೂ ಇದರ ಕುರಿತು ಕಾವಲುಗಾರ ಮಾಜಿ ಶಾಸಕನಿಗೆ ಮಾಹಿತಿ ಮುಟ್ಟಿಸಿದ್ದು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಮರಗಳನ್ನು ಕಡಿದು ಹಾಕಿರುವುದು ಬೆಳಕಿಗೆ ಬಂದಿದೆ. ಸದ್ಯ ಇದರ ಕುರಿತು ಮಾಜಿ ಶಾಸಕ ಜಿಕೆ ವೆಂಕಟಶಿವಾರೆಡ್ಡಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ಜೋತಿ ಶಾಲೆಯ ಮುಖ್ಯಸ್ಥರ ವಿರುದ್ದ ದೂರುದಾಖಲಿಸಿದ್ದಾರೆ. ಇನ್ನೂ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.