ಕೋಲಾರ: ತಾಲೂಕಿನ ವೇಮಗಲ್‌ನಲ್ಲಿ ಐದನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಭೂಮಿ ನಂದನಾ ಚಾರಿಟಬಲ್ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆದ, ಕನ್ನಡ ರಾಜ್ಯೋತ್ಸವಕ್ಕೆ ಅದ್ದೂರಿ ವೇದಿಕೆ ಸಿದ್ಧವಾಗಿದ್ದರೂ, ಪೇಜಾವರ ಶ್ರೀಗಳ ನಿಧನ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಯಿತು.
ಕನ್ನಡ ಧ್ವಜಾರೋಹಣ ಮಾಡದೇ ಕುವೆಂಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ದೀಪ ಬೆಳಗುವುದರೊಂದಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್. ವೆಂಕಟೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಇದೇ ವೇಳೆ ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆ, ವೇಮಗಲ್ ಹೋಬಳಿ ಮಟ್ಟದಲ್ಲಿ ಕನ್ನಡ ಬಾವುಟಗಳುಳ್ಳ ನೂರಾರು ಆಟೋಗಳಿಂದ ಮೆರವಣಿಗೆ ನಡೆಸಲಾಯಿತು. ಜೊತೆಗೆ ವೀರಗಾಸೆ, ಡೊಳ್ಳು ಕುಣಿತವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿಗಳಾದ ವಿ.ಆರ್. ಸುದರ್ಶನ್ ಸೇರಿದಂತೆ ಸಂಘ ಸಂಸ್ಥೆಗಳ ಕಾರ್ಯಕರ್ತರು, ಆಟೋ ಚಾಲಕರು ಪಾಲ್ಗೊಂಡಿದ್ದರು.