ಕೋಲಾರ: ಆಕೆ ಚೆನ್ನಾಗಿ ಓದಿ ಜೀವನದಲ್ಲಿ ಯಶಸ್ಸನ್ನು ಪಡೆದು ಬರುತ್ತೇನೆ ಎಂದು ಹೇಳಿ ಬೆಂಗಳೂರಿಗೆ ಹೋಗಿದ್ದ ಯುವತಿ. ಆದರೆ ಅವತ್ತು ನಡೆದ ಅದೊಂದು ದುರ್ಘಟನೆ ಆಕೆಯ ಜೀವವನ್ನೇ ಅಗ್ನಿ ಪರೀಕ್ಷೆಗೆ ತಳ್ಳಿತ್ತು. ಹದಿಮೂರು ದಿನಗಳ ಕಾಲ ಸಾವು ನಡುವಿನ ಮದ್ಯೆ ಹೋರಾಟ ಮಾಡಿದ ಯುವತಿ ಕೊನೆಗೆ ತನಗಾಗಿ ಕಾದಿದ್ದ ಹೆತ್ತವರನ್ನು ನೋಡಲು ಜೀವಂತವಾಗಿ ಹಿಂತಿರುಗಿ ಬರಲೇ ಇಲ್ಲ.
ಹೌದು, ಕಳೆದ 15 ದಿನಗಳ ಹಿಂದೆ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಎಂಎಸ್ಸಿ ಓದುತ್ತಿದ್ದ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ದಾಸರ ಹೊಸಹಳ್ಳಿ ಗ್ರಾಮದ ವಿದ್ಯಾರ್ಥಿನಿ ಶಿಲ್ಪ ಭಾನುವಾರ ಇಹಲೋಕ ತ್ಯಜಿಸಿದರು. ಕಳೆದ 13 ದಿನಗಳ ಹಿಂದೆ ಬಿಎಂಟಿಸಿ ಬಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಅವರನ್ನು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಶಿಲ್ಪ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಇನ್ನು, ಘಟನೆ ಹಿನ್ನೆಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಬಿಎಂಟಿಸಿ ಪದೇ ಪದೆ ಬೇಜವಾಬ್ದಾರಿಯಿಂದ ಹೀಗೆ ಅಮಾಯಕರ ಜೀವಗಳನ್ನು ತೆಗೆಯುತ್ತಿದೆ ಎಂದು ಆರೋಪಿಸಿ ಸಾರಿಗೆ ಸಚಿವರು ರಾಜೀನಾಮೆ ನೀಡುವಂತೆಯೂ ಆಗ್ರಹಿಸಿದ್ರು. ಆದರೆ ಯಾವ ಪ್ರತಿಭಟನೆಗೂ ಫಲ ಸಿಗದೆ ಶಿಲ್ಪ ಕೊನೆಯುಸಿರೆಳೆದಿದ್ದಾರೆ.
ಓದಿನಲ್ಲಿ ಬುದ್ಧಿವಂತೆಯಾಗಿದ್ದ ಶಿಲ್ಪ.. ಕೋಲಾರದ ದಾಸರಹೊಸಹಳ್ಳಿ ಗ್ರಾಮದ ರವಿ ಕುಮಾರ್ ಹಾಗೂ ಪದ್ಮ ದಂಪತಿಗೆ ಮೂರು ಜನ ಹೆಣ್ಣುಮಕ್ಕಳು. ಶಿಲ್ಪ ಎರಡನೇ ಪುತ್ರಿ. ಚೆನ್ನಾಗಿ ಓದುತ್ತಿದ್ದ ಶಿಲ್ಪ ಗ್ರಾಮದಲ್ಲೂ ಅಚ್ಚುಮೆಚ್ಚಿನ ಮಗಳು. ಶಿಲ್ಪ ತಂದೆ ತಾಲೂಕು ರವಿ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರೆ, ತಾನು ಕೂಡಾ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು ಎಂಬ ಕನಸು ಕಂಡಿದ್ದ ಹುಡುಗಿ. ಆದರೆ ವಿಧಿಯಾಟವೇ ಬೇರೆ ಇತ್ತು. ಹತ್ತಾರು ಆಸೆಗಳನ್ನು ಹೊತ್ತು ಬೆಂಗಳೂರಿಗೆ ಹೋಗಿದ್ದ ಶಿಲ್ಪ ಜೀವಂತವಾಗಿ ಬರಲೇ ಇಲ್ಲ.
ವಿಧಿಯಾಟ ಬಲ್ಲವರಾರು.. ಘಟನೆ ನಡೆದ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಶಿಲ್ಪ ಅವರಿಗೆ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಲ್ಪ ಚೇತರಿಸಿಕೊಂಡು ಮನೆಗೆ ವಾಪಸ್ ಬಂದೇ ಬರುತ್ತಾಳೆ ಎಂದು ಎಲ್ಲರೂ ಆಸೆಗಣ್ಣಿನಿಂದ ಕಾಯುತ್ತಲೇ ಇದ್ದರು. ಆದರೆ ವಿಧಿಯಾಟವೇ ಇಲ್ಲಿ ಮೇಲಾಗಿದೆ. ಶಿಲ್ಪ ಮನೆಗೆ ವಾಪಸ್ ಬಾರಲೇ ಇಲ್ಲ. ಭಾನುವಾರ ಮುಂಜಾನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಶಿಲ್ಪ ಪಾರ್ಥಿವ ಶರೀರವನ್ನು ಆಂಬ್ಯುಲೆನ್ಸ್ ಮೂಲಕ ಕಾಮಾಕ್ಷಿಪಾಳ್ಯ ಹಾಗೂ ಜ್ಞಾನಭಾರತಿ ಕ್ಯಾಂಪಸ್ ಠಾಣಾ ಪೊಲೀಸರು ಎಸ್ಕಾರ್ಟ್ನಲ್ಲಿ ಶಿಲ್ಪಾಳ ಹುಟ್ಟೂರಿಗೆ ತರಲಾಯಿತು.
ತವರಿನಲ್ಲಿ ನೀರವ ಮೌನ.. ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿತ್ತು. ಪಾರ್ಥಿವ ಶರೀರ ಬರುವ ವೇಳೆಗೆ ತಮ್ಮ ಮನೆಯ ಬಳಿಯಲ್ಲಿ ಇದ್ದ ಜಾಗದಲ್ಲಿ ಶಿಲ್ಪ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಸಂಬಂಧಿಕರು ಶಿಲ್ಪ ಜೊತೆಗೆ ಓದಿದ್ದ ಸ್ನೇಹಿತರು, ಶಿಲ್ಪ ಇದ್ದ ಹಾಸ್ಟೆಲ್ನ ವಿದ್ಯಾರ್ಥಿನಿಯರು ಶಿಲ್ಪ ಅವರ ಸ್ವಗ್ರಾಮಕ್ಕೆ ಬಂದು ಅಂತಿಮ ದರ್ಶನ ಪಡೆದರು. ಅಲ್ಲದೆ ಈ ವೇಳೆ ಶಿಲ್ಪರ ಕಾಲೇಜಿನ ದಿನಗಳನ್ನು ನೆನೆದು ಹಾಸ್ಟೆಲ್ನ ರೂಂಮೇಟ್ಗಳು ಅವರ ಸ್ನೇಹ ಹಾಗೂ ಪ್ರೀತಿಯ ಗುಣವನ್ನು ಸ್ಮರಿಸಿ ಕಣ್ಣೀರು ಹಾಕಿದರು.
ಒಟ್ಟಾರೆ, ಬಡಕುಟುಂಬದಲ್ಲಿ ಹುಟ್ಟಿ ಚೆನ್ನಾಗಿ ಓದಿ ಹತ್ತಾರು ಕನಸುಗಳನ್ನು ಕಟ್ಟಿಕೊಂಡು ಬೆಂಗಳೂರಿನಂತಹ ಮಾಯಾ ನಗರಕ್ಕೆ ಬಂದಿದ್ದ ಯುವತಿ ಶಿಲ್ಪ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಚೆನ್ನಾಗಿ ಓದಿ ತನ್ನ ಕಾಲ ಮೇಲೆ ನಿಂತು ಸಮಾಜದಲ್ಲೊಬ್ಬ ಗಣ್ಯ ವ್ಯಕ್ತಿಯಾಗುತ್ತಾರೆಂದು ಕನಸು ಕಂಡಿದ್ದ ಹೆತ್ತವರು ಇಂದು ದುಃಖದಲ್ಲಿ ಮುಳುಗಿದ್ದಾರೆ.
ಓದಿ: ಡೆಪ್ಯುಟಿ ಸ್ಪೀಕರ್ ಅಂತ್ಯಕ್ರಿಯೆ; ಮಣ್ಣಲ್ಲಿ ಮಣ್ಣಾದ ಆನಂದ ಮಾಮನಿ