ಕೋಲಾರ: ನೂರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಇಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿಯಿಂದ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಸಂಬಂಧ ಮೆಥೋಡಿಸ್ಟ್ ಚರ್ಚ್ ಪಾದ್ರಿ ರೆವರಂಟ್ ಶಾಂತಕುಮಾರ್ ಸೇರಿ ನಾಲ್ವರನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ಇಟಿಸಿಎಂ ಆಸ್ಪತ್ರೆ ಮಾಜಿ ಲೆಕ್ಕಾಧಿಕಾರಿ ಜಾನ್ಸನ್ ವಿರುದ್ಧ ನಕಲಿ ವಿದ್ಯಾರ್ಥಿನಿಯರಿಂದ ಸುಳ್ಳು ಮೊಕದ್ದಮೆ ದಾಖಲು ಮಾಡಿದ್ದ ಹಿನ್ನೆಲೆಯಲ್ಲಿ ಶಾಂತಕುಮಾರ್ ಹಾಗೂ ನಕಲಿ ಪ್ರಕರಣದಲ್ಲಿ ಭಾಗಿಯಾದ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.
ಇಟಿಸಿಎಂ ಆಸ್ಪತ್ರೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಮೆಥೋಡಿಸ್ಟ್ ಚರ್ಚ್ ಪಾದ್ರಿ ರೆವರಂಟ್ ಶಾಂತಕುಮಾರ್ ಎಂಬುವರು ಈ ಹುನ್ನಾರ ನಡೆಸಿದ್ದರು. ಶಾಂತಕುಮಾರ್ ಇಬ್ಬರು ವಿದ್ಯಾರ್ಥಿನಿಯರಾದ ಜನಿಫರ್ ಹಾಗೂ ಮಂಜು, ಹಾಸ್ಟೆಲ್ ವಾರ್ಡನ್ ಶೀಲಾ ಎಂಬ ಮಹಿಳೆಯರ ಮೂಲಕ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 30ರಂದು ದೂರು ನೀಡಿದ್ದರು.
ಆದರೆ ಇದು ಸುಳ್ಳು ದೂರು ಎಂಬುದು ತನಿಖೆಯಿಂದ ಬಯಲಾಗಿದೆ. ಅಲ್ಲದೆ ನ್ಯಾಯಾಧೀಶರ ಮುಂದೆಯೂ ಸಹ ಸುಳ್ಳು ಹೇಳಿಕೆ ನೀಡಿದ್ದರು. ಈ ಸಂಬಂಧ ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ಪತ್ನಿ ಸವಿತಾಜಾನ್ ತನಿಖೆಗೆ ಆಗ್ರಹಿಸಿ ಎಸ್ಪಿ ದೇವರಾಜ್ ಅವರಿಗೆ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪೊಲೀಸರಿಗೆ ಸುಳ್ಳು ದೂರು ಎಂಬುದು ಗೊತ್ತಾಗಿದೆ. ಸುಳ್ಳು ದೂರು ಸಾಬೀತು ಹಿನ್ನೆಲೆ ಚರ್ಚ್ ಫಾದರ್ ಶಾಂತಕುಮಾರ್, ನಕಲಿ ವಿದ್ಯಾರ್ಥಿನಿಯರು ಹಾಗೂ ವಾರ್ಡನ್ರನ್ನು ಕೋಲಾರದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಮಕ್ಕಳ ಕಳ್ಳರ ಹಾವಳಿ: ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮಕ್ಕೆ ಎಸ್ಪಿ ಸೂಚನೆ