ಕೋಲಾರ: "ಕುಮಾರಸ್ವಾಮಿ ಅವರು ಜಾತ್ಯಾತೀತ ಎನ್ನುವಂಥದ್ದನ್ನು ತೆಗೆದು ಹಾಕಿ ಜಾತೀಯವಾದಿ ಜನತಾದಳ ಎಂದು ಕಟ್ಟಿಕೊಳ್ಳುವುದು ಒಳ್ಳೆಯದು. ಅವರ ಜಾತಿಯ ದ್ವೇಷ ಮತ್ತು ಜಾತ್ಯಾತೀತತೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ" ಎಂದು ಬ್ರಾಹ್ಮಣ ಸಿಎಂ ಹೇಳಿಕೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹರಿಹಾಯ್ದರು.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೀವು ಏನೇ ತಿಪ್ಪರಲಾಗ ಹಾಕಿದರೂ, ಎಲ್ಲಾ ಟೈಮ್ನಲ್ಲೂ ಲಾಟರಿ ಹೊಡೆಯುತ್ತೆ ಅಂತ ಭಾವಿಸಬಾರದು. 2006, 2018ರಲ್ಲಿ ಲಾಟರಿ ಹೊಡೆದು ಮುಖ್ಯಮಂತ್ರಿ ಆದ್ರಿ. ಪ್ರತಿ ಚುನಾವಣೆಯಲ್ಲೂ ಇದೇ ತರ ಲಾಟರಿನೇ ಹೊಡೆಯಲಿ ಅಂದ್ರೆ ಪ್ರಜಾಪ್ರಭುತ್ವ ದುರ್ಬಲ ಆಗುತ್ತೆ. ಒಂದು ಪಕ್ಷಕ್ಕೆ ಕ್ಲಿಯರ್ ಮೆಜಾರಿಟಿ ಸಿಗ್ಬೇಕು. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿ ಪ್ರಧಾನಿಗಳಾಗಿದ್ದಾರೆ. ಅವರು ಎಲ್ಲಿಯೂ ಜಾತಿ ಹೆಸರನ್ನು ಹೇಳಿಕೊಂಡು ರಾಜಕಾರಣ ಮಾಡಿಲ್ಲ. ಬಿಜೆಪಿ ಯಾವತ್ತಿಗೂ ದೇಶ ಮೊದಲು ಎಂಬ ಸಿದ್ಧಾಂತವನ್ನು ಇಟ್ಟುಕೊಂಡಿದೆ. ಬದಲಾಗಿ ಜಾತಿಗನುಗುಣವಾಗಿ ಅಲ್ಲ" ಎಂದರು.
ಇದನ್ನೂ ಓದಿ: ನಾನು ಬಯಸಿ ಸಿಎಂ ಆಗಿಲ್ಲ, ನರೇಂದ್ರ ಮೋದಿ ಅವರಿಂದಾಗಿ ಸಿಎಂ ಆದೆ: ಬೊಮ್ಮಾಯಿ
ಟಿಪ್ಪು ಸಿದ್ಧಾಂತಕ್ಕೆ ಕಾಂಗ್ರೆಸ್ ಬೆಂಬಲ: "ಟಿಪ್ಪು ಒಬ್ಬ ರಾಜನಲ್ಲ. ಮೈಸೂರು ಒಡೆಯರ ಸೇನಾಧಿಪತಿ ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳಿವೆ. ಆದರೆ ದೇಶಕ್ಕಾಗಿ ಟಿಪ್ಪು ಕೊಡುಗೆ ಶೂನ್ಯ. ರಾಜಾಮ್ಮಣಿ, ರಾಜ ಪರಿವಾರದವರನ್ನು ಸೆರೆವಾಸಕ್ಕೆ ದೂಡಿದ್ದು, ಕೊಡಗಿನಲ್ಲಿ ನರಮೇಧ, ಕನ್ನಡ ಭಾಷೆಯ ಬದಲಿ ಪರ್ಶಿಯನ್ ಭಾಷೆ ಹೇರಿಕೆ ಮಾಡಿದ್ದು ಟಿಪ್ಪುವೇ. ವಿಪರ್ಯಾಸವೆಂದರೇ ದೇಶದ್ರೋಹಿ ಟಿಪ್ಪುವಿನ ಸಿದ್ಧಾಂತವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ" ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಮಗಳಿಗೆ ಇಡಿ ನೋಟೀಸ್ ಜಾರಿ ಕುರಿತು ಪ್ರತಿಕ್ರಿಯಿಸಿದ ಅವರು, "ಪ್ರಾಮಾಣಿಕರಿಗೆ ಯಾಕೆ ಇಡಿ ಭಯ? ಅವರ ನಾಯಕ ರಾಹುಲ್ ಗಾಂಧಿಗೆ ಆಲೂಗಡ್ಡೆ ಹಾಕಿ ಚಿನ್ನ ತೆಗೆಯಲು ಗೊತ್ತಿದೆ. ಈ ವಿದ್ಯೆಯನ್ನು ಕೇವಲ ರಾಬರ್ಟ್ ಬಾದ್ರಾ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಹೇಳಿಕೊಟ್ಟಿದ್ದಾರೆ. ದೇಶದ ರೈತರಿಗೂ ಹೇಳಿಕೊಟ್ಟಿದ್ದರೇ ಒಳ್ಳೆಯದಿತ್ತು" ಎಂದು ಲೇವಡಿ ಮಾಡಿದರು.
'ಹಿಂದೂ, ಹಿಂದುತ್ವದ ಬಗ್ಗೆ ಗೊತ್ತಿಲ್ಲ...': "ಸಿದ್ದರಾಮಯ್ಯರವರೇ, ನೀವು ಆಗಾಗ ವೇಷ ಬದಲಾಯಿಸುತ್ತೀರಿ. ನಿಮಗೆ ಹಿಂದೂ, ಹಿಂದುತ್ವದ ಬಗ್ಗೆ ಗೊತ್ತಿರೋದಕ್ಕೆ ಸಾಧ್ಯವಿಲ್ಲ. ಅಲ್ಲದೇ ತಾನು ಹಿಂದೂ ಎಂದು ಹೇಳಿ ಹಿಂದುತ್ವದ ವಿರೋಧಿ ಎನ್ನುವ ಸಿದ್ದರಾಮಯ್ಯರವರೇ, ಹಿಂದೂ ಎಂದರೆ ದೇಹ, ಹಿಂದುತ್ವ ಎಂದರೆ ಜೀವ. ದೇಹ ಹೊತ್ತುಕೊಂಡು ಜೀವ ಇಲ್ಲದೆ ಇದ್ದರೆ ಏನು ಮಾಡುತ್ತೀರಿ?. ಹಿಂದುತ್ವ ಇದ್ದರೆ ಅದು ಜೀವ, ಜೀವ ಹೋದ ಮೇಲೆ ಏನಂತ ಕರೆಯುತ್ತೇವೆ? ನೀವು ಅದು ಆಗಬಾರದು ಎಂಬುದು ನಮ್ಮ ಬಯಕೆ" ಎಂದು ಟಾಂಗ್ ನೀಡಿದರು. "ಪ್ರವಾಸ ಯೋಜನೆ ತಂದವರು ಸಿದ್ದರಾಮಯ್ಯರವರು. ಅದು ಕೂಡ ಒಂದು ಜಾತಿಯ ಮಕ್ಕಳಿಗಾಗಿ ಮಾತ್ರ. ಆದರೆ ಮಕ್ಕಳು ದೇವರಿಗೆ ಸಮಾನರು ಅಂತಾರೆ. ಹಾಗಿದ್ದ ಮೇಲೆ ಅಂತಹ ಮಕ್ಕಳಲ್ಲಿ ಸಿದ್ದರಾಮಯ್ಯ ಜಾತಿ ವಿಷ ಬೀಜ ಬಿತ್ತಿದ್ದಾರೆ" ಎಂದರು.
ಇದನ್ನೂ ಓದಿ: 4 ದಶಕದ ರಾಜಕೀಯ ಹೋರಾಟಗಾರ, ಶಾಸಕನಾಗಿ ಕಡೆಯ ಅಧಿವೇಶನ: ಸದನದಲ್ಲಿ ಬಿಎಸ್ವೈಗೆ ಗೌರವಪೂರ್ವಕ ವಿದಾಯ?