ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಚಲ್ಲಂಪಲ್ಲಿ ಗ್ರಾಮದಲ್ಲಿ ಯುವಕರು, ಹಿರಿಯರು ಮನೆ ಮನೆಗೆ ತೆರಳಿ ಮುಂಬರುವ ಯಾವುದೇ ಚುನಾವಣೆಗೆ ಬೆಂಬಲ ನೀಡಬಾರದು, ಜೊತೆಗೆ ಜನಪ್ರತಿನಿಧಿಗಳಿಗೆ ರಾಜಕಾರಣಿಗಳಿಗೆ ಪ್ರವೇಶ ನೀಡಬಾರದು ಅಂತಾ ಗ್ರಾಮದ ಜನತೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮತ್ತೊಂದೆಡೆ ಪ್ರತಿ ಚುನಾವಣೆಯಲ್ಲೂ ಭಾಗವಹಿಸದೆ ದೂರ ಉಳಿಯೋಣ ಎಂದು ಪಟ್ಟು ಹಿಡಿದು ಗ್ರಾಮದ ಮುಂದೆ ಚುನಾವಣಾ ಬಹಿಷ್ಕಾರ ಎಂದು ಬ್ಯಾನರ್ ಹಿಡಿದು ಕುಳಿತು ಪ್ರತಿಭಟಿಸುತ್ತಿದ್ದಾರೆ.
ಅಂದಹಾಗೇ ಈ ಚಲ್ಲಂಪಲ್ಲಿ ಗ್ರಾಮ ಕಳೆದ ಸುಮಾರು 25 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ದೂರ ಉಳಿದಿದೆ. ಯಾವುದೇ ಆಭಿವೃದ್ದಿಯ ಗಂಧಗಾಳಿ ಕೂಡ ಇತ್ತ ಸೋಕಿಲ್ಲ. ಇನ್ನು ವರ್ಷದಿಂದ ವರ್ಷಕ್ಕೆ ಸಾಲು ಸಾಲು ಚುನಾವಣೆಗಳು ನಡೀತಾನೇ ಇವೆ. ಆದ್ರೆ ಈ ಗ್ರಾಮದ ನಸೀಬು ಮಾತ್ರ ಬದಲಾಗಿಲ್ಲ.
ಪ್ರತೀ ಬಾರಿ ಚುನಾವಣಾ ಸಂದರ್ಭದಲ್ಲಿ ಮತದಾರರಿಂದ ಓಟು ಗಿಟ್ಟಿಸಿಕೊಳ್ಳುವ ಸಲುವಾಗಿ ಇಲ್ಲಿನ ಜನನಾಯಕರು ಕೊಡುವಂತಹ ಆಶ್ವಾಸನೆಗಳನ್ನ ನಂಬಿ ಗ್ರಾಮಸ್ಥರು ರೋಸಿ ಹೋಗಿದ್ದಾರೆ.ಹೀಗಾಗಿ ಈ ಬಾರಿ ನಾಯಕರ ಮಾತಿಗೆ ಮರುಳಾಗಬಾರದು ನಮ್ಮ ಬೇಡಿಕೆ ಈಡೇರುವವರೆಗೂ ಮುಂಬರುವ ಎಲ್ಲಾ ಚುನಾವಣೆಯನ್ನ ಬಹಿಷ್ಕಾರ ಮಾಡ್ಬೇಕು ಅಂತ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕಾಗಿ ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳಿಗೆ ನೋ ಎಂಟ್ರಿ ಅಂತ ಬೋರ್ಡ್ ಹಾಕಿದ್ದಾರೆ.
ಅಷ್ಟೇ ಅಲ್ಲ ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಬರಲು ಕನಿಷ್ಟ 4 ಕಿ.ಮೀ ಕಾಲ್ನಡಿಗೆಯಲ್ಲಿ ಹೋಗಬೇಕಾಗಿದೆ. ಬಸ್ ವ್ಯವಸ್ಥೆ ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಕಳೆದ 25 ವರ್ಷಗಳಿಂದ ಅಭಿವೃದ್ದಿಯ ಕನಸನ್ನ ಕಾಣುತ್ತಿರುವ ಈ ಗ್ರಾಮವನ್ನ, ಇಲ್ಲಿನ ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಇದನ್ನೆಲ್ಲಾ ಕಂಡು ಬೇಸತ್ತ ಈ ಗ್ರಾಮಸ್ಥರು ಈ ಬಾರಿ ಜನನಾಯಕರಿಗೆ ತಕ್ಕ ಬುದ್ಧಿ ಕಲಿಸಬೇಕು ಅಂತ ನಿರ್ಧರಿಸಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಇದಕ್ಕೆ ಗ್ರಾಮದ ಮಹಿಳೆಯರು ಯುವಕರು ಸೇರಿದಂತೆ ಗ್ರಾಮದ ಹಿರಿಯರು ಎಲ್ಲರೂ ಸಾಥ್ ನೀಡಿದ್ದಾರೆ.
ಇಷ್ಟು ದಿನ ಜನಪ್ರತಿನಿಧಿಗಳು ಈ ಗ್ರಾಮಸ್ಥರನ್ನ ಕಡೆಗಣಿಸಿದ್ರೆ, ಇನ್ಮುಂದೆ ಚುನಾವಣೆ ಸಂದರ್ಭಗಳಲ್ಲಿ ಜನಪ್ರತಿನಿಧಿಗಳನ್ನ ಕಡೆಗಾಣಿಸಲು ಗ್ರಾಮಸ್ಥರು ಮುಂದಾಗಿರೋದ್ರಿಂದ ಇನ್ನಾದರೂ ಈ ಗ್ರಾಮದ ಅಭಿವೃದ್ಧಿಯ ಕನಸು ನನಸಾಗಬಹುದೇನೋ ಕಾದು ನೋಡೋಣ....