ಕೊಡಗು: ವಿಶ್ವ ಆನೆಗಳ ದಿನಾಚರಣೆಯನ್ನು ಜಿಲ್ಲೆಯ ಸಾಕಾನೆ ಶಿಬಿರ ದುಬಾರೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಾಕಾನೆ ಶಿಬಿರ ದುಬಾರೆಯಲ್ಲಿ ಮುಂಜಾನೆಯಿಂದಲೇ ಆನೆಗಳನ್ನು ಕಾವೇರಿ ನೀರಿನಲ್ಲಿ ಜಳಕ ಮಾಡಿಸಿ ಬಣ್ಣ - ಬಣ್ಣಗಳಿಂದ ಅಲಂಕಾರ ಮಾಡಿ, ಆನೆ ಮೇಲೆ ಚಿತ್ರಬಿಡಿಸಲಾಯಿತು. ಬಳಿಕ ಹೂ, ಹಾರ ಹಾಕಿ ದೊಡ್ಡ ಮತ್ತು ಮರಿ ಆನೆಗಳಿಗೆ ಪೂಜೆ ಸಲ್ಲಿಸಿ ವಿಶೇಷ ಆಹಾರ ನೀಡಲಾಯಿತು.
ಕಾಡಿನ ಮಕ್ಕಳು ಎಲ್ಲರೂ ಒಗ್ಗೂಡಿ ಆನೆಗಳಿಗೆ ಸಿಹಿ ಕೊಟ್ಟು ತಾವು ಸಿಹಿ ತಿಂದು ವಿಜೃಂಭಣೆಯಿಂದ ಆನೆದಿನ ಆಚರಣೆ ಮಾಡಿದರು. ಅರಣ್ಯ ಸಿಬ್ಬಂದಿ, ಮಾಹುತರು ಮತ್ತು ಕಾವಾಡಿಗಳು ಆನೆಗಳಿಗೆ ಪೂಜೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಗಜಪಡೆ ಮಾಹುತರಿಗೆ, ಅರಣ್ಯಾಧಿಕಾರಿಗಳಿಗೆ ಸೊಂಡಿಲನ್ನು ಎತ್ತಿ ಗೌರವ ಸಲ್ಲಿಸಿದವು.
ಪ್ರವಾಸಿಗರಿಗೆ ಸಂಭ್ರಮ :
ಇನ್ನು ದುಬಾರೆ ಶಿಬಿರಕ್ಕೆ ಬಂದಿದ್ದ ಪ್ರವಾಸಿಗರು ಅಲಂಕಾರಗೊಂಡಿದ್ದ ಆನೆಗಳನ್ನು ಒಟ್ಟಿಗೆ ನೋಡಿ ಸಂತೋಷಪಟ್ಟರು. ಶಿಬಿರದಲ್ಲಿ ಒಟ್ಟು 30 ಆನೆಗಳಿದ್ದು, ಎಲ್ಲ ಆನೆಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿದ್ದವು. ಇದು ಇಡೀ ಶಿಬಿರಕ್ಕೆ ಹೊಸ ಕಳೆಯನ್ನು ತಂದುಕೊಟ್ಟಿತ್ತು.
ಓದಿ: ವಿಶ್ವ ಆನೆಗಳ ದಿನಾಚರಣೆ: ಸಕ್ರೇಬೈಲು ಆನೆ ಬಿಡಾರದಲ್ಲಿ ಸರಳ ಪೂಜೆ
ಕಾಫಿತೋಟದಲ್ಲಿ ಮತ್ತು ಗ್ರಾಮಗಳಿಗೆ ನುಗ್ಗಿ ದಾಂಧಲೆ ಮಾಡಿದ ಕಾಡಾನೆಗಳು ಹಿಡಿದು ದುಬಾರೆಯಲ್ಲಿ ಪಳಗಿಸುವ ಕೇಂದ್ರವಾಗಿದೆ. ಇಲ್ಲಿ ಆನೆಗಳಿಗೆ ಮಾನವರೊಂದಿಗೆ ಹೇಗೆ ಬದುಕಬೇಕು ಎನ್ನುವುದನ್ನು ಕಲಿಸಿಕೊಡಲಾಗುತ್ತದೆ. ದುಬಾರೆ ಆನೆ ತರಬೇತಿ ಕೇಂದ್ರ ದೇಶದಲ್ಲಿಯೇ ಖ್ಯಾತಿಗಳಿಸಿದ್ದು, ವಿಶ್ವವಿಖ್ಯಾತ ದಸರಾ ಹಬ್ಬದಲ್ಲಿ ಇಲ್ಲಿನ ಆನೆಗಳು ಪ್ರಮುಖ ಪಾತ್ರವಹಿಸುತ್ತವೆ.