ಕೊಡಗು : ಎತ್ತ ನೋಡಿದರತ್ತ ಜನ, ಎಲ್ಲರ ಮುಖಗಳಲ್ಲಿ ಮಡುಗಟ್ಟಿದ ಮೌನ, ಆತಂಕ, ದುಗುಡ, ಮುಗಿಲು ಮುಟ್ಟಿದ ಆಕ್ರಂದನ. ಹೆಣಗಳ ಸಾಲು ಮೆರವಣಿಗೆ, 6 ಜನರ ಸಾಮೂಹಿಕ–ಅಂತ್ಯಸಂಸ್ಕಾರ. ಇದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ಕಂಡುಬಂದ ಮನಕಲಕುವ ದೃಶ್ಯ.
ಅವರೆಲ್ಲ ಒಂದೇ ಊರಿನವರು. ಸ್ನೇಹಿತನ ಮದುವೆ ಮುಗಿಸಿ ತಮ್ಮೂರಿಗೆ ವಾಪಸ್ ಆಗುತ್ತಿದ್ದರು. ಆದರೆ, ಮನೆ ತಲುಪುವ ಮುನ್ನವೇ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಮರಕ್ಕೆ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ಪಾಲಿಬೆಟ್ಟದ 6 ಮಂದಿ ದಾರುಣ ಸಾವನ್ನಪ್ಪಿದ್ದರು. ಇಂದು ಇಡೀ ಗ್ರಾಮದ ಜನರು ಸೇರಿ 6 ಶವಗಳನ್ನು ಅಂತ್ಯಸಂಸ್ಕಾರ ಮಾಡಿದರು. ಇಡೀ ಗ್ರಾಮವನ್ನು ಬಂದ್ ಮಾಡಿ 6 ಶವಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಘಟನೆ ವಿವರ : ಪಾಲಿ ಬೆಟ್ಟ ಗ್ರಾಮದ ಸದಾನಂದ ಎಂಬುವರಿಗೆ ಹುಣಸೂರಿನ ವಧುವಿನ ಜತೆಗೆ ವಿವಾಹ ಏರ್ಪಟ್ಟಿತ್ತು. ಹುಣಸೂರಿನ ಕಲ್ಯಾಣ ಮಂಟಪವೊಂದರಲ್ಲಿ ನಡೆದ ಮದುವೆಗೆ ಗ್ರಾಮದ ಅನಿಲ್ (44), ಸಂತೋಷ್(42) ಬಾಬು(48), ರಾಜೇಶ್(40), ದಯಾನಂದ್(42), ವಿನೀತ್ (37), ಕೀರ್ತನ(22), ಏಂಜಲ್ (14) ಹಾಗೂ ಫಿಲಿಪ್ (65) ತೆರಳಿದ್ದರು.
ಮದುವೆ ಮುಗಿಸಿಕೊಂಡು ಹುಣಸೂರಿನಿಂದ ಪಾಲಿ ಬೆಟ್ಟಕ್ಕೆ ವಾಪಸ್ ಆಗುತ್ತಿದ್ದ ವೇಳೆ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಆಲದ ಮರಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಅನಿಲ್, ಸಂತೋಷ್, ಬಾಬು, ರಾಜೇಶ್, ದಯಾನಂದ್, ವಿನಿತ್ ಸ್ಥಳದಲ್ಲೇ ಮೃತಪಟ್ಟಿದ್ದರು. ಉಳಿದ ಮೂವರನ್ನು ಸ್ಥಳೀಯರು ರಕ್ಷಿಸಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ: ಹುಣಸೂರಿನಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 6 ಮಂದಿ ಸಾವು