ಕೊಡಗು : ರಾಜ್ಯಕ್ಕೆ ನೀರುಣಿಸುವ ನದಿ ಕಾವೇರಿಯ ಹೂಟ್ಟೂರಿನಲ್ಲಿ ಇದೀಗ ನೀರಿಗಾಗಿ ಭಾರಿ ಸಂಕಷ್ಟ ಶುರುವಾಗಿದೆ. ಕೊಡಗಿನಲ್ಲಿ ಹುಟ್ಟುವ ಜೀವನದಿ ಕಾವೇರಿ ರೈತರ ಜೀವನಾಡಿ, ಜನರ ಧಣಿವಾರಿಸುವ ಗಂಗಾ ಮಾತೆಯೂ ಹೌದು. ಇಂತಹ ಪವಿತ್ರ ನದಿಯ ನಾಡಿನ ಜನರಿಗೆ ನೀರಿನ ಬವಣೆ ಎದುರಾಗಿದೆ. ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ಜಲಮೂಲಗಳು ಬತ್ತಿ ಸಮಸ್ಯೆ ಎದುರಾದರೆ, ಇದೀಗ ಮಳೆಗಾಲದಲ್ಲೂ ಮತ್ತೊಂದು ಸಮಸ್ಯೆ ಜನರಿಗೆ ತಲೆನೋವು ತಂದಿದೆ.
ನೀರಿನ ಕೊರತೆ ಕುರಿತು ಮಾತನಾಡಿದ ಶಾಸಕ ಡಾ.ಮಂತರ್ ಗೌಡ, "ಮಡಿಕೇರಿ ನಗರದಲ್ಲಿ ಕಳೆದ 5 ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದೆ. ಜನತೆ ಪ್ರತಿನಿತ್ಯ ತೊಂದರೆ ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮಡಿಕೇರಿ ಸಮೀಪದ ಕೂಟೂ ಹೊಳೆಯಿಂದ ಮಡಿಕೇರಿ ನಗರಕ್ಕೆ ನೀರು ಪೂರೈಕೆಯಲ್ಲಿ ಸಮಸ್ಯೆ ಆಗಿರುವುದು. ಆದರೆ ಕೂಟೂ ಹೊಳೆಯಿಂದ ನೀರು ಪಂಪ್ ಮಾಡುವ 300 ಹೆಚ್ಪಿ ಸಾಮರ್ಥ್ಯದ ಎರಡು ಮೋಟಾರ್‌ಗಳು ಇದೀಗ ದುರಸ್ತಿಗೆ ಒಳಗಾಗಿವೆ. ಇದರಿಂದ ಮಡಿಕೇರಿ ನಗರಕ್ಕೆ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಕೊರತೆ ಸರಿದೂಗಿಸಲು ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. ಓವರ್ ಲೋಡ್ ವಾಹನಗಳು ಗುಡ್ಡಗಾಡು ಪ್ರದೇಶವನ್ನು ಹತ್ತಲು ಸಾಧ್ಯವಾಗದೇ ಇರುವುದರಿಂದ ಕೆಲವೊಂದು ಗುಡ್ಡಗಾಡು ಪ್ರದೇಶಗಳಿಗೂ ಸೂಕ್ತ ರೀತಿಯಲ್ಲಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿಯವರೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೋಟಾರು ಸರಿಯಾಗಿ ನಿರ್ವಹಣೆ ಮಾಡಿಲ್ಲ" ಎಂದು ಹೇಳಿದರು.
"ಇಂದು ಕೂಟುಹೊಳೆಗೆ ಭೇಟಿ ನೀಡಿದ್ದೇನೆ. ಕಳೆದ 15 ದಿನಗಳ ಹಿಂದೆ ಒಂದು ಮೋಟಾರು ಕೆಟ್ಟು ಹೋಗಿದ್ದು, ಒಂದೇ ಮೋಟಾರ್ನಲ್ಲಿ ನೀರು ಪಂಪ್ ಮಾಡಲಾಗುತ್ತಿದೆ. ಇದೀಗ ಇರುವ ಒಂದು ಮೋಟಾರು ಕೂಡ ಸಮಸ್ಯೆಗೆ ಸಿಲುಕಿದೆ. ಅಧಿಕಾರಿಗಳ ನಿರ್ಲಕ್ಷ್ಯವೋ ಇಲ್ಲ ಜನಪ್ರತಿನಿಧಿಗಳ ನಿರ್ಲಕ್ಷ್ಯವೊ ಗೊತ್ತಿಲ್ಲ. ಸಮಸ್ಯೆಯನ್ನು ಸರಿ ಮಾಡಲು 6 ಗಂಟೆಯ ಗಡುವನ್ನು ಅಧಿಕಾರಿಗಳಿಗೆ ನೀಡಿದ್ದಾನೆ. ಅಷ್ಟರೊಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ" ಎಂದು ಮಂತರ್ ಗೌಡ್ ತಿಳಿಸಿದರು.
ರಾಜ್ಯಕ್ಕೆ ಮುಂಗಾರು ಪ್ರವೇಶ ವಿಚಾರ: ರಾಜ್ಯದಲ್ಲಿ ಜೂನ್ 5ಕ್ಕೆ ಮುಂಗಾರು ಪ್ರವೇಶ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹಲವು ಕಾರಣಗಳಿಂದ ಮಳೆ ವಿಳಂಬವಾಗಿದೆ. ಹೀಗಾಗಿ ರಾಜ್ಯದ ವಿವಿಧೆಡೆ ನೀರಿಗಾಗಿ ದೊಡ್ಡ ಪ್ರಮಾಣದಲ್ಲಿ ಹಾಹಾಕಾರ ಈಗಾಗಲೇ ಶುರುವಾಗಿದೆ. ಕೆಲವು ಕಡೆ ಶುದ್ದ ಕುಡಿಯುವ ನೀರಿನ ಸಮಸ್ಯೆ ಎದುರಾದ ಕಾರಣ ಕಲುಷಿತ ನೀರನ್ನು ಕುಡಿದು ಅನೇಕರು ಮೃತಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಮಹಾರಾಷ್ಟ್ರ ಸಿಎಂಗೆ ಸಿದ್ದರಾಮಯ್ಯ ಪತ್ರ: ರಾಜ್ಯಕ್ಕೆ 5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ